ಎಲ್ಲಾ ಕಾಯಿದೆ ಮತ್ತು ಶಾಸನ ಹಾಗೂ ಅಧಿಕೃತ ಸಂವಹನಗಳಲ್ಲಿ ಕೇಂದ್ರ ಅಥವಾ ಕೇಂದ್ರೀಯ ಸರ್ಕಾರ ಎಂಬ ಪದಕ್ಕೆ ಬದಲಾಗಿ ಒಕ್ಕೂಟ ಸರ್ಕಾರ ಎಂದು ಬದಲಾಯಿಸಲು ನಿರ್ದೇಶಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಕೇಂದ್ರ ಸರ್ಕಾರವು ಶುಕ್ರವಾರ ವಿರೋಧ ದಾಖಲಿಸಿದೆ [ಆತ್ಮರಾಮ್ ಸರೋಗಿ ವರ್ಸಸ್ ಭಾರತ ಸರ್ಕಾರ].
ಅರ್ಜಿಯು ಅನಗತ್ಯವಾಗಿದ್ದು, ಅದು ನಿರ್ವಹಣೆಗೆ ಅರ್ಹವಾಗಿಲ್ಲ. ಹೀಗಾಗಿ ಅರ್ಜಿ ವಜಾ ಮಾಡಬೇಕು ಎಂದು ಕೇಂದ್ರ ಸರ್ಕಾರ ವಕೀಲರು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ತಿಳಿಸಿದರು.
ಇದೇ ವಿಷಯವು ರಾಜ್ಯಸಭೆಯ ಸ್ಥಾಯಿ ಸಮಿತಿಯ ಮುಂದೆ ಬಾಕಿ ಇದೆ ಎಂಬ ವಿಚಾರದ ಹಿನ್ನೆಲೆಯಲ್ಲಿ ನ್ಯಾಯಾಲಯವು ಪ್ರಕರಣವನ್ನು ಡಿಸೆಂಬರ್‌ಗೆ ಮುಂದೂಡಿತು.
ಸಂವಿಧಾನದ ಪ್ರಕಾರ ಭಾರತವು ರಾಜ್ಯಗಳ ಒಕ್ಕೂಟವಾಗಿದ್ದು, ಬ್ರಿಟಿಷ್ ಆಡಳಿತದಲ್ಲಿ ಇದ್ದ ರೀತಿಯಲ್ಲಿ ಕೇಂದ್ರ ಸರ್ಕಾರ ಎಂಬ ಪರಿಕಲ್ಪನೆ ಇರಲು ಸಾಧ್ಯವಿಲ್ಲ ಎಂದು 84 ವರ್ಷದ ಸಾಮಾಜಿಕ ಕಾರ್ಯಕರ್ತ ಆತ್ಮರಾಮ್ ಸರೋಗಿ ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಗೋಪಾಲ ಶಂಕರನಾರಾಯಣನ್ ಅವರು ಸಾಮಾನ್ಯ ಕ್ಲಾಸಸ್ ಕಾಯಿದೆಯಲ್ಲಿ ಉಲ್ಲೇಖಿಸಲಾಗಿರುವ ಕೇಂದ್ರ ಸರ್ಕಾರದ ವ್ಯಾಖ್ಯಾನವನ್ನು ಸಂವಿಧಾನಕ್ಕೆ ವಿರುದ್ಧ ಎಂದು ವಜಾ ಮಾಡಬೇಕು. ಇದು ಕೇಂದ್ರ ಸರ್ಕಾರವಲ್ಲ ಎಂದು ಕೋರಿದರು.
ಅರ್ಜಿಯಲ್ಲಿ ಯಾವುದೇ ತೆರನಾದ ಸಾರ್ವಜನಿಕ ಹಿತಾಸಕ್ತಿ ನಮಗೆ ಕಾಣುತ್ತಿಲ್ಲ. ಸರ್ಕಾರವು ಇಂಥದ್ದೇ ಪದ ಬಳಕೆ ಮಾಡಬೇಕು ಎಂದು ಹೇಳಲು ಅರ್ಜಿದಾರರಿಗೆ ಯಾವುದೇ ಆಧಾರ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಶಂಕರನಾರಾಯಣನ್ ಅವರು “ಸಂವಿಧಾನದ 1ನೇ ವಿಧಿಯಲ್ಲಿ ಒಕ್ಕೂಟ ಎಂದು ಬಳಕೆ ಮಾಡಲಾಗಿದೆಯೇ ವಿನಾ ಕೇಂದ್ರೀಯ ಎಂದಲ್ಲ. ದೇಶದಲ್ಲಿ ಒಕ್ಕೂಟ ಆಡಳಿತ ಪ್ರದೇಶಗಳು ಇವೆಯೇ ವಿನಾ ಕೇಂದ್ರೀಯ ಆಡಳಿಗಳಲ್ಲ ಎಂದರು. ಇದಕ್ಕೆ ಕೇಂದ್ರ ಸರ್ಕಾರವು ವಿರೋಧ ದಾಖಲಿಸಿತು.