ಕೋವಿಡ್‌ ಲಸಿಕೆ ಸಂಬಂಧ ಕೇಂದ್ರ ಸರ್ಕಾರದ ನೀತಿ ಕಾಳಸಂತೆಗೆ ನೆರವು ನೀಡುವಂತಿದೆ: ಕೇರಳ ಹೈಕೋರ್ಟ್‌ಗೆ ಸರ್ಕಾರದ ವಿವರಣೆ

“ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಖಾಸಗಿ ಕಂಪೆನಿಗಳಿಗೆ ಕೈಚಳಕ ತೋರಲು ಅವಕಾಶ ಮಾಡಿಕೊಡಲಾಗದು. ಖಾಸಗಿ ಕಂಪೆನಿಗಳಿಗೆ ಕಾಳಸಂತೆ ವ್ಯವಹಾರ ನಡೆಸಲು ಹೇಗೆ ತಾನೆ ಅವಕಾಶ ಮಾಡಿಕೊಡಲು ಸಾಧ್ಯ? ” ಎಂದು ರಾಜ್ಯ ಸರ್ಕಾರದ ವಕೀಲರು ಪೀಠಕ್ಕೆ ತಿಳಿಸಿದ್ದಾರೆ.
Kerala High Court, Covid Vaccine
Kerala High Court, Covid Vaccine
Published on

ಕೇಂದ್ರ ಸರ್ಕಾರದ ಕೋವಿಡ್‌ ಲಸಿಕಾ ನೀತಿಯು ಕಾಳಸಂತೆ ವಹಿವಾಟಿಗೆ ಪೂರಕವಾಗಿದ್ದು, ಖಾಸಗಿ ಸಂಸ್ಥೆಗಳು ಮತ್ತು ಲಸಿಕೆ ಉತ್ಪಾದಕರು ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕೇರಳ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

ರಾಜ್ಯದಲ್ಲಿ ಕೋವಿಡ್‌ ಲಸಿಕೆ ಕೊರತೆ ಎದುರಾಗಿರುವ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಬುಧವಾರ ನ್ಯಾಯಮೂರ್ತಿಗಳಾದ ಎ ಮೊಹಮ್ಮದ್‌ ಮುಷ್ತಾಕ್‌ ಮತ್ತು ಕೌಸರ್‌ ಎಡಪ್ಪಾಗಡ್‌ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರ ವಕೀಲ ಕೆ ವಿ ಸೋಹನ್‌ ಅವರು “ಕೇಂದ್ರ ಸರ್ಕಾರವು ಕಾಳಸಂತೆಗೆ ಬೆಂಬಲ ನೀಡುತ್ತಿದೆ. ಲಸಿಕೆಗೆ ವಿಭಿನ್ನ ದರಗಳನ್ನು ಏಕೆ ವಿಧಿಸಲಾಗುತ್ತಿದೆ? ಉತ್ಪಾದನೆಯ ದರವನ್ನು ಆಧರಿಸಿ ಲಸಿಕೆಗೆ ದರ ನಿಗದಿ ಮಾಡಬೇಕು. ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಕಂಪೆನಿಗಳ ಕೈಚಳಕಕ್ಕೆ ಅವಕಾಶ ಮಾಡಿಕೊಡಬಾರದು. ಖಾಸಗಿ ಕಂಪೆನಿಗಳು ಕಾಳಸಂತೆ ವ್ಯವಹಾರ ನಡೆಸಲು ಹೇಗೆ ತಾನೆ ಅವಕಾಶ ಮಾಡಿಕೊಡಲು ಸಾಧ್ಯ? ದುಬಾರಿ ದರಗಳನ್ನು ವಿಧಿಸಲಾಗುತ್ತಿದೆ” ಎಂದು ಪೀಠಕ್ಕೆ ವಿವರಿಸಿದರು.

ಕೇರಳ ವೈದ್ಯಕೀಯ ಸೇವಾ ಮಂಡಳಿ (ಕೆಎಂಎಸ್‌ಸಿಎಲ್‌) ಪರವಾಗಿ ವಾದಿಸಿದ ವಕೀಲ ಎಂ ಅಜಯ್‌ ಅವರು ರಾಜ್ಯವು ತನ್ನ ಬಳಿ ಲಸಿಕೆಗಾಗಿ ಬರುವ ಎಲ್ಲ ನಾಗರಿಕರಿಗೂ ಉಚಿತವಾಗಿ ಲಸಿಕೆ ನೀಡಲು ಇಚ್ಛಿಸುತ್ತದೆ, ಇದಕ್ಕೆ ಅಗತ್ಯ ಹಣ ಖರ್ಚು ಮಾಡಲೂ ಸಿದ್ಧವಿದೆ. ಇದಾಗಲೇ ರೂ. 1 ಕೋಟಿ ಲಸಿಕೆ ಪೂರೈಕೆಗೆ ಮನವಿ ಮಾಡಿದ್ದು 70 ಲಕ್ಷ ಕೋವಿಶೀಲ್ಡ್ 30 ಲಕ್ಷ ಕೋವ್ಯಾಕ್ಸಿನ್‌ಗಳಿಗೆ ಕೋರಲಾಗಿದೆ. ಆದರೆ, ಈವರೆಗೆ ಕೇವಲ 8.84 ಲಕ್ಷ ಲಸಿಕೆ ಮಾತ್ರವೇ ಪೂರೈಕೆಯಾಗಿದೆ ಎಂದರು.

ಅರ್ಜಿದಾರರ ಪರವಾಗಿ ವಾದಿಸಿದ ಪ್ರಶಾಂತ್‌ ಸುಗತನ್‌ ಅವರು ಭಾರತ ಸರ್ಕಾರದ ಬೌದ್ಧಿಕ ಹಕ್ಕು ಸ್ವಾಮ್ಯದಡಿ ಇರುವ ಲಸಿಕೆಯ ತಂತ್ರಜ್ಞಾನವನ್ನು ಉತ್ಪಾದಕರಿಗೆ ವರ್ಗಾಯಿಸುವ ಮೂಲಕ ಲಸಿಕೆಯ ಉತ್ಪಾದನೆಯ ವೇಗವನ್ನು ಹೆಚ್ಚಿಸುವಂತೆ ಕೋರಿದರು.

ಬರುವ ಮಂಗಳವಾರ ಪ್ರಕರಣದ ವಿಚಾರಣೆ ಮುಂದುವರೆಯಲಿದೆ.

Kannada Bar & Bench
kannada.barandbench.com