ವಾಹನಗಳ ಮುಂಭಾಗದ ಆಸನಕ್ಕೆ ಏರ್‌‌ಬ್ಯಾಗ್‌ ಕಡ್ಡಾಯ: ಕೇಂದ್ರ ಸರ್ಕಾರದಿಂದ ಕರಡು ಅಧಿಸೂಚನೆ

ಈ ಸಂಬಂಧ ಡಿ. 28ರಂದು ಕರಡು ಅಧಿಸೂಚನೆ ಹೊರಡಿಸಲಾಗಿದ್ದು ಸಲಹೆ ಸೂಚನೆ ಹಾಗೂ ಆಕ್ಷೇಪಣೆ ಸಲ್ಲಿಸಲು ಮೂವತ್ತು ದಿನಗಳ ಸಮಯಾವಕಾಶ ನೀಡಲಾಗಿದೆ.
Airbags (Representative Image)
Airbags (Representative Image) Wikipedia
Published on

ಪ್ರಯಾಣಿಕರ ಮುಂಭಾಗದ ಆಸನಗಳಿಗೆ ಏರ್‌ಬ್ಯಾಗ್ ಅಳವಡಿಕೆ‌ ಕಡ್ಡಾಯಗೊಳಿಸುವ ಸಲುವಾಗಿ 1989ರ ಮೋಟಾರು ವಾಹನ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಏಪ್ರಿಲ್ 2021ರ ನಂತರ ಹೊಸ ಮಾದರಿ ವಾಹನಗಳಿಗೆ ಮತ್ತು ಜೂನ್ 2021ರ ನಂತರ ಅಸ್ತಿತ್ವದಲ್ಲಿರುವ ವಾಹನ ಮಾದರಿಗಳಿಗೆ ಏರ್‌ ಬ್ಯಾಗ್‌ ಅಳವಡಿಕೆ ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ. ಈ ಕುರಿತು ಡಿ. 28ರಂದು ಕರಡು ಅಧಿಸೂಚನೆ ಹೊರಡಿಸಲಾಗಿದ್ದು ಸಲಹೆ ಸೂಚನೆ ಹಾಗೂ ಆಕ್ಷೇಪಣೆ ಸಲ್ಲಿಸಲು ಮೂವತ್ತು ದಿನಗಳ ಸಮುಯಾವಕಾಶ ನೀಡಲಾಗಿದೆ.

Also Read
ಪೆರಿಫೆರಲ್ ರಸ್ತೆ: ಇಐಎನ ತಜ್ಞರ ಸಮಿತಿಯ ಕೂಲಂಕಷ ಪರಿಶೀಲನೆಗೆ ಹೈಕೋರ್ಟ್ ತಡೆ, ಆನ್‌ಲೈನ್‌ ಸಭೆ ತಡೆಗೆ ನಿರಾಕರಣೆ

ಕರಡು ಅಧಿಸೂಚನೆಯ ವಿವರ ಹೀಗಿದೆ: ಉಪ-ನಿಯಮ (9)ರ ಅಡಿ ಇರುವ ಮಾಹಿತಿಯಷ್ಟೇ ಅಲ್ಲದೆ 2021‌ರ ಏಪ್ರಿಲ್ 01ರಂದು ಮತ್ತು ಆ ನಂತರ ತಯಾರಾದ ಹೊಸ ಮಾದರಿಯ ಯಾವುದೇ ವಾಹನವಿದ್ದರೂ, ಮತ್ತು ಅಸ್ತಿತ್ವದಲ್ಲಿರುವ ಮಾದರಿಗಳ ಸಂದರ್ಭದಲ್ಲಿ, 2021ರ ಜೂನ್ 01ರಂದು ಹಾಗೂ ಆನಂತರ ತಯಾರಾದ ಯಾವುದೇ ವಾಹನಗಳಿದ್ದರೂ ಚಾಲಕನನ್ನು ಹೊರತುಪಡಿಸಿದಂತೆ ಮುಂಭಾಗದಲ್ಲಿ ವ್ಯಕ್ತಿಗಳು ಕೂರುವ ಆಸನದಲ್ಲಿ ಏರ್‌ಬ್ಯಾಗ್‌ ಅಳವಡಿಸುವುದು. ಅಂತಹ ಏರ್‌ಬ್ಯಾಗ್‌ನ ಅರ್ಹತೆಯು ಬಿಐಎಸ್‌ ಕಾನೂನಿನಡಿ ಬ್ಯೂರೋ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್ಸ್‌ (ಬಿಐಎಸ್‌) ನಿಗದಿಪಡಿಸುವ ಮಾನದಂಡಗಳ ಅಧಿಸೂಚನೆ ಹೊರಬೀಳುವವರೆಗೆ ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ‌ 2016ರ ಎಐಎಸ್ 145ರ ಪ್ರಕಾರ ಇರಲಿದೆ.

ಕರಡಿನ ಕುರಿತಾದ ಆಕ್ಷೇಪಣೆ ಮತ್ತು ಸಲಹೆಗಳನ್ನು ಜಂಟಿ ಕಾರ್ಯದರ್ಶಿ (ಎಂವಿಎಲ್, ಸಾರಿಗೆ, ಟೋಲ್), ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಸಾರಿಗೆ ಭವನ, ಸಂಸತ್‌ ಮಾರ್ಗ, ನವದೆಹಲಿ - 110 001 ಗೆ ಅಥವಾ- comments-morth@gov.in. ಗೆ ಕಳಿಸಬಹುದು.

Kannada Bar & Bench
kannada.barandbench.com