ಕೇಂದ್ರ ಸರ್ಕಾರವು 2016ರಲ್ಲಿ ₹500 ಮತ್ತು 1,000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ಬುಧವಾರ ಕಾಯ್ದಿರಿಸಿದೆ [ವಿವೇಕ್ ನಾರಾಯಣ ಶರ್ಮಾ ಮತ್ತು ಭಾರತ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ ].
ಇಂದು ವಕೀಲರ ವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಹಾಗೂ ಬಿ ವಿ ನಾಗರತ್ನ ಅವರಿದ್ದ ಸಂವಿಧಾನ ಪೀಠ ತೀರ್ಪು ಕಾಯ್ದಿರಿಸಿತು.
ಡಿಸೆಂಬರ್ 10 ರ ಶನಿವಾರದೊಳಗೆ ತಮ್ಮ ಲಿಖಿತ ಮಂಡನೆಯನ್ನು ಸಲ್ಲಿಸುವಂತೆ ಕಕ್ಷಿದಾರರಿಗೆ ನಿರ್ದೇಶಿಸಿದ ನ್ಯಾಯಾಲಯ ನೋಟು ರದ್ದತಿ ನಿರ್ಧಾರಕ್ಕೆ ಸಂಬಂಧಿಸಿದ ಕೆಲವು ಬಹಿರಂಗಪಡಿಸಲಾಗದ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.
ನಿನ್ನೆಯ ವಾದ ಮಂಡನೆ ವೇಳೆ ಹಿರಿಯ ವಕೀಲ, ಕೇಂದ್ರ ಸರ್ಕಾರದ ಮಾಜಿ ಹಣಕಾಸು ಸಚಿವ ಚಿದಂಬರಂ ಅವರು, "ನೋಟು ಅಮಾನ್ಯೀಕರಣ ಕುರಿತ ಕೇಂದ್ರದ ನಿರ್ಧಾರಕ್ಕೆ ಆರ್‌ಬಿಐ ವಿನಮ್ರವಾಗಿ ಮಣಿಯಿತು. ನೋಟು ರದ್ದತಿ ಕಾರ್ಯಕ್ಕೆ ಹೇಗೆ ಅನುಮೋದನೆ ದೊರೆಯಿತು ಎಂಬುದನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಬೇಕು. ಇದರಿಂದಾಗಿ ಈ ಕ್ರಮ ಕುರಿತಾದ ಕಾನೂನು ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ನಿರ್ಧರಿಸಬಹುದು" ಎಂದಿದ್ದರು.
ಚಿದಂಬರಂ ವಾದದ ಪ್ರಮುಖಾಂಶಗಳು
ನೋಟು ಅಮಾನ್ಯೀಕರಣದ ಕುರಿತು ಕೇವಲ ಒಂದು ಗಂಟೆ ಕಾಲ ಚರ್ಚೆ ನಡೆಸಿದ ಆರ್‌ಬಿಐ ಕೇಂದ್ರದೆದುರು ವಿನಮ್ರವಾಗಿ ಶರಣಾಯಿತು.
ನೋಟು ರದ್ದತಿಯನ್ನು ಮುಂದುವರಿಸುವ ಮುನ್ನ ಖುದ್ದು ಕೇಂದ್ರ ಸರ್ಕಾರವೇ ಅದರ ಅಗಾಧತೆಯನ್ನು ಪರಿಗಣಿಸಿರಲಿಲ್ಲ.
ಸಭೆಯ ಮಾಹಿತಿಯನ್ನು ಕೇಂದ್ರ ಸರ್ಕಾರ ಮುಚ್ಚಿಡುತ್ತಿರುವುದೇಕೆ? ಪ್ರಕರಣ ಇತ್ಯರ್ಥಕ್ಕೆ ಈ ದಾಖಲೆಗಳ ಸಂಪೂರ್ಣ ಅವಶ್ಯಕತೆ ಇದೆ. ಅವರ ನಿರ್ಧಾರಕ್ಕೆ ಆಧಾರವೇನು ಯಾವ ಅಂಶವನ್ನು ಪರಿಗಣಿಸಿದರು ಎಂಬುದು ತಿಳಿಯಬೇಕು. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸರ್ಕಾರ ಬಹಿರಂಗಪಡಿಸಬೇಕಿದೆ. ತಮ್ಮ ನಿರ್ಧಾರದ ಅಗಾಧತೆ ಮತ್ತು ಪ್ರಮಾಣಾನುಗುಣತೆಯನ್ನು ಸರ್ಕಾರ ವಿವರಿಸಬೇಕಿದೆ. ಅದಲ್ಲದೆ ಹೋದರೆ ಕುರುಡರು ಕುರುಡರನ್ನು ಮುನ್ನಡೆಸಿದಂತಾಗುತ್ತದೆ.
ಸಂಸತ್ತು ಅಂಗೀಕರಿಸಿದ ಕಾನೂನಿನ ಮೂಲಕ ನೋಟು ಅಮಾನ್ಯೀಕರಣವನ್ನು ಮಾನ್ಯ ಮಾಡಲಾಗಿದೆ ಎಂಬುದು ಸರಿಯಲ್ಲ. ಆರ್‌ಬಿಐ ಕಾಯಿದೆಯ ನಿಯಮಾವಳಿಯಂತೆ ಅಷ್ಟೇ ಕಾನೂನು ಜಾರಿಗೊಳಿಸಲಾಗಿದೆ.
ನೋಟು ಅಮಾನ್ಯೀಕರಣ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳು ಎತ್ತಿರುವ ಹನ್ನೊಂದು ಕಾನೂನು ಪ್ರಶ್ನೆಗಳನ್ನು ಆಧರಿಸಿ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆ ನಡೆಸಿತ್ತು. ನಿನ್ನೆಯ ವಿಚಾರಣೆ ವೇಳೆ ಆರ್‌ಬಿಐ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಜೈದೀಪ್ ಗುಪ್ತಾ, ಈ ಕ್ರಮವು ತರಾತುರಿಯಲ್ಲಿದೆ ಎಂಬ ಅರ್ಜಿದಾರರ ವಾದಗಳು ನೋಟು ಅಮಾನ್ಯೀಕರಣದ ಅಂತಿಮ ನಿರ್ಧಾರಕ್ಕೆ ಮಾತ್ರ ಅನ್ವಯಿಸುತ್ತದೆಯೇ ಹೊರತು ಅದರ ಹಿಂದಿನ ಕಾರ್ಯವಿಧಾನಕ್ಕಲ್ಲ ಎಂದಿದ್ದರು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ದೇಶವು ನಿಯಂತ್ರಿತ ಆರ್ಥಿಕತೆಯಿಂದ ಮಾರುಕಟ್ಟೆ ಆಧಾರಿತ ಆರ್ಥಿಕತೆಗೆ ಪರಿವರ್ತನೆಗೊಂಡಂತೆ, ಒಂದು ಚೌಕಟ್ಟಿನಿಂದ ಇನ್ನೊಂದಕ್ಕೆ ಚಲಿಸಲು ಅನುವು ಮಾಡಿಕೊಡಲು ನೋಟು ಅಮಾನ್ಯೀಕರಣ ಮಾಡಲಾಗಿದೆ. ನೋಟು ಅಮಾನ್ಯೀಕರಣ ನೀತಿಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದರೆ ಅದರ ಸಾರ ದುರ್ಬಲಗೊಳ್ಳುತ್ತದೆ ಎಂದು ವಿವರಿಸಿದ್ದರು.