ಕೇಂದ್ರ ಸರ್ಕಾರವು ನ್ಯಾಯಾಂಗವನ್ನು ಬಲಪಡಿಸುವ, ಬೆಂಬಲಿಸುವ ಹಾಗೂ ಅದರ ಸ್ವಾತಂತ್ರ್ಯವನ್ನು ಕಾಪಾಡುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕೇಂದ್ರ ಕಾನೂನು ಸಚಿವರಾದ ಕಿರೆಣ್ ರಿಜಿಜು ಅವರು ಶನಿವಾರ ಹೇಳಿದ್ದಾರೆ.
ಭಾರತೀಯ ವಕೀಲರ ಪರಿಷತ್ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ಸರ್ಕಾರವು ನ್ಯಾಯಾಂಗದ ಸ್ವಾತಂತ್ರ್ಯವನ್ನು ಬಲಪಡಿಸುವುದು ಮಾತ್ರವೇ ಅಲ್ಲ ಅದಕ್ಕೆ ಸೂಕ್ತ ಬೆಂಬಲವನ್ನೂ ನೀಡಲಿದೆ,” ಎಂದು ಅವರು ಈ ವೇಳೆ ಹೇಳಿದರು.
ತಮ್ಮ ಭಾಷಣದ ವೇಳೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಾಕಿ ಪ್ರಕರಣಗಳ ಸಂಖ್ಯೆಯನ್ನು ಅದರಲ್ಲಿಯೂ ವಿಶೇಷವಾಗಿ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಪ್ರಕರಣಗಳ ಸಂಖ್ಯೆಯು ಹೆಚ್ಚಿರುವ ಬಗ್ಗೆ ಅವರು ಗಮನಸೆಳೆದರು. ಈ ಸಮಸ್ಯೆಯನ್ನು ಪರಿಹರಿಸಲು ತುರ್ತಾಗಿ ಗಮನಹರಿಸಬೇಕಾದ ಅಗತ್ಯತೆಯ ಬಗ್ಗೆ ಒತ್ತು ನೀಡಿದರು. “ಜನರು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ವಿಚಾರವಾಗಿ ಮಾತನಾಡುತ್ತಾರೆ. ಅದರೆ ಸೂಕ್ಷ್ಮವಾಗಿ ಗಮನಿಸಿದರೆ ನಾವು ಕೆಳಹಂತದ ನ್ಯಾಯಾಲಯಗಳಲ್ಲಿ ಈ ವಿಚಾರವಾಗಿ ತುರ್ತಾಗಿ ಗಮನಿಸಬೇಕಾದ ಅಗತ್ಯವಿದೆ. ದಯನೀಯ ಹಿನ್ನೆಲೆಯಿಂದ ಬಂದ ವ್ಯಕ್ತಿಯೊಬ್ಬ ನ್ಯಾಯವನ್ನು ಬಯಸುವಾಗ ನ್ಯಾಯಕ್ಕಾಗಿ ಅತ ಎಲ್ಲವನ್ನೂ ತ್ಯಾಗ ಮಾಡಿರುತ್ತಾನೆ. ತನ್ನ ಮನೆ, ಭೂಮಿ ಎಲ್ಲವನ್ನೂ ಮಾರಿಕೊಂಡಿರುತ್ತಾನೆ. ಆದರೆ, ನ್ಯಾಯದಾನವು ವಿಳಂಬವಾಗತೊಡಗಿದರೆ ಆಗ ನಮ್ಮೆಲ್ಲರ ಮೇಲೆ ಪ್ರಶ್ನೆಗಳು ಏಳುತ್ತವೆ,” ಎಂದು ಅಭಿಪ್ರಾಯಪಟ್ಟರು.
ಮುಂದುವರೆದು, ಮೂರು ವರ್ಷಕ್ಕಿಂತ ಹೆಚ್ಚು ಕಾಲ ನ್ಯಾಯದಾನದಲ್ಲಿ ವಿಳಂಬವಾದರೆ ಅದು ನ್ಯಾಯದಾನದ ನಿರಾಕರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. “ನಮ್ಮ ದೇಶದ ನ್ಯಾಯದಾನ ಪ್ರಕ್ರಿಯೆಯ ಬಗ್ಗೆ ಮಾತನಾಡುವಾಗ ಸಾಮಾನ್ಯ ಮನುಷ್ಯನಿಗೆ ಪ್ರಾಮುಖ್ಯತೆಯನ್ನು ನೀಡುವ ಬಗ್ಗೆ ನಾವು ಖಾತರಿಪಡಿಸಿಕೊಳ್ಳಬೇಕಿದೆ. ಮೂರು ವರ್ಷಕ್ಕಿಂತ ಹೆಚ್ಚು ಕಾಲ ನ್ಯಾಯದಾನವನ್ನು ವಿಳಂಬ ಮಾಡುವುದು ನಿಜವಾಗಿಯೂ ವಿಳಂಬವೇ ಸರಿ. ಅ ವೇಳೆಗೆ ನ್ಯಾಯದಾನದ ಅವಶ್ಯಕತೆಯೇ ಇಲ್ಲವಾಗಬಹುದು,” ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಅವರು, ಸಿಜೆಐ ಎನ್ ವಿ ರಮಣ ಅವರನ್ನು ಅಭಿನಂದಿಸಿ ಮಾತನಾಡುತ್ತಾ ಅವರ ವ್ಯಕ್ತಿತ್ವವನ್ನು ಶ್ಲಾಘಿಸಿದರು. “ಭಾರತದ ನ್ಯಾಯಾಂಗದಲ್ಲಿ ಹೊಸದೊಂದು ಅಧ್ಯಾಯಕ್ಕೆ ಮುಂದಾಗಿರುವ, ವ್ಯಾಪಕ ಋಜುತ್ವ, ಪ್ರಾಮಾಣಿಕತೆಯ ವ್ಯಕ್ತಿ ರಮಣ ಅವರಾಗಿದ್ದು ಅವರನ್ನು ಸನ್ಮಾನಿಸುವುದು ನನ್ನ ಪಾಲಿನ ಗೌರವವಾಗಿದೆ,” ಎಂದರು. ಅಲ್ಲದೆ ಸಿಜೆಐ ಅವರೊಂದಿಗಿನ ತಮ್ಮ ಮೊದಲ ಭೇಟಿಯನ್ನು ನೆನೆದು, “ನಾವು ಪೂರ್ಣ ನಂಬಿಕೆ ಮತ್ತು ವಿಶ್ವಾಸವನ್ನು ಇರಿಸುವ ಸಿಜೆಐ ನಮಗೆ ದೊರೆತಿದ್ದಾರೆ,” ಎಂದು ಅಂದು ತಮಗೆ ಅನಿಸಿದ್ದಾಗಿ ಮನದ ಭಾವನೆಯನ್ನು ವ್ಯಕ್ತಪಡಿಸಿದರು.
ಮೂಲಸೌಕರ್ಯಕ್ಕೆ ಆದ್ಯತೆ
ಅಧೀನ ನ್ಯಾಯಾಲಯಗಳಲ್ಲಿ ಮೂಲಸೌಕರ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಇತ್ತೀಚಿಗೆ ನೆಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿರುವ ಮಾಹಿತಿಯನ್ನು ಕೇಂದ್ರ ಕಾನೂನು ಸಚಿವ ಕಿರೆಣ್ ರಿಜಿಜು ಸಮಾರಂಭದ ವೇಳೆ ಹೊರಗೆಡವಿದರು. ಅಧೀನ ನ್ಯಾಯಾಲಯಗಳಲ್ಲಿ ವಿಚಾರಣಾ ಕೊಠಡಿಗಳು, ವಕೀಲರ ಸಭಾಂಗಣಗಳು, ಡಿಜಿಟಲ್ ವ್ಯವಸ್ಥೆಯ ಕೋಣೆಗಳು, ಶುಚಿತ್ವದ ಕೊಠಡಿಗಳು ಮುಂತಾದವನ್ನು ಕಲ್ಪಿಸಲು ಸರ್ಕಾರವು ಮುಂದಾಗಿರುವುದಾಗಿ ತಿಳಿಸಿದರು. ನ್ಯಾಯಾಧೀಶರು ಹಾಗೂ ವಕೀಲರ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ತಾವು ರಾಜ್ಯ ಸರ್ಕಾರಗಳ ಮನವೊಲಿಕೆಗೂ ಸಹ ನಿರಂತರವಾಗಿ ಮುಂದಾಗುವುದಾಗಿ ಹೇಳಿದರು.