[ಇ–ಗ್ರೀವೆನ್ಸ್ ಲೋಕಾರ್ಪಣೆ] ನ್ಯಾಯಾಂಗದ ತಂತ್ರಜ್ಞಾನ ಅಭಿವೃದ್ಧಿಗೆ ಕೇಂದ್ರ ಬದ್ಧ: ಸಚಿವ ರಾಜೀವ್ ಚಂದ್ರಶೇಖರ್‌

ಸುಪ್ರೀಂ ಕೋರ್ಟ್‌ ತೀರ್ಪುಗಳು, ತಿದ್ದುಪಡಿಗಳು ವಕೀಲರಿಗೆ ತಕ್ಷಣಕ್ಕೇ ಲಭ್ಯವಾಗಬೇಕು. ಕರ್ನಾಟಕದ ನ್ಯಾಯಾಂಗ ವ್ಯವಸ್ಥೆ ಈ ನಿಟ್ಟಿನಲ್ಲಿ ಯಾವುದೇ ಸೌಕರ್ಯ ಬಯಸಿದರೆ ಅದನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದ ಕಾನೂನು ಸಚಿವ ಮಾಧುಸ್ವಾಮಿ.
Union Minister of State for Electronics and IT Rajeev Chandrasekhar launches E-grievance portal
Union Minister of State for Electronics and IT Rajeev Chandrasekhar launches E-grievance portal

ನ್ಯಾಯಾಂಗ ಕ್ಷೇತ್ರದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್ ಹೇಳಿದರು.

ಬೆಂಗಳೂರು ವಕೀಲರ ಸಂಘದ ಆಶ್ರಯದಲ್ಲಿ ಸೋಮವಾರ ಹೈಕೋರ್ಟ್‌ ವಕೀಲರ ಸಭಾಂಗಣದಲ್ಲಿ ನಡೆದ ‘ಇ–ಗ್ರೀವೆನ್ಸ್ ಪೋರ್ಟಲ್‌‘ (ಇ-ಕುಂದುಕೊರತೆ) ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ನ್ಯಾಯಾಂಗವು ಕಳೆದ ಎರಡು ವರ್ಷಗಳ ಕೋವಿಡ್‌ ಸಂದರ್ಭದಲ್ಲಿ ತಂತ್ರಜ್ಞಾನದ ಗರಿಷ್ಠ ಬಳಕೆ ಮಾಡಿಕೊಂಡಿದೆ ಎಂದು ಅವರು ಮೆಚ್ಚುಗೆ ಸೂಚಿಸಿದರು. ಇದೇ ವೇಳೆ ತ್ವರಿತ ನ್ಯಾಯದಾನಕ್ಕೆ ಅನುವಾಗುವ ಎಲ್ಲ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರು, “ವಕೀಲರಿಗೆ ತಕ್ಷಣವೇ ಗ್ರಂಥಾಲಯ ಸೌಲಭ್ಯ ದೊರೆಯುಂತೆ ಮಾಡಲು ಮತ್ತು ನ್ಯಾಯಾಂಗದಲ್ಲಿ ತಂತ್ರಜ್ಞಾನದ ವೇಗಕ್ಕೆ ಹೆಚ್ಚಿನ ಆದ್ಯತೆ ನೀಡಲು ಚಿಂತಿಸುವ ಅವಶ್ಯಕತೆ ಇದೆ” ಎಂದು ಅಭಿಪ್ರಾಯಪಟ್ಟರು.

“ಸುಪ್ರೀಂ ಕೋರ್ಟ್‌ ತೀರ್ಪುಗಳು, ತಿದ್ದುಪಡಿಗಳು ವಕೀಲರಿಗೆ ತಕ್ಷಣಕ್ಕೇ ಲಭ್ಯವಾಗಬೇಕು. ಕರ್ನಾಟಕದ ನ್ಯಾಯಾಂಗ ವ್ಯವಸ್ಥೆ ಈ ನಿಟ್ಟಿನಲ್ಲಿ ಯಾವುದೇ ಸೌಕರ್ಯ ಬಯಸಿದರೆ ಅದನ್ನು ನೀಡಲು ಸರ್ಕಾರ ಸಿದ್ಧವಿದೆ. ಕರ್ನಾಟಕ ಹೈಕೋರ್ಟ್‌ ದೇಶದಲ್ಲೇ ಅಗ್ರಗಣ್ಯ ಹೈಕೋರ್ಟ್‌ ಎನ್ನಿಸಿಕೊಳ್ಳಬೇಕು” ಎಂದರು.

“ವಿಚಾರಣೆಗೆ ಕಾದಿರುವ ಬಾಕಿ ಪ್ರಕರಣಗಳ ಸಂಖ್ಯೆ ಬೃಹತ್‌ ಪ್ರಮಾಣದಲ್ಲಿದ್ದು, ಅವುಗಳ ತ್ವರಿತ ವಿಲೇವಾರಿಗೆ ತಂತ್ರಜ್ಞಾನ ಬಳಕೆಯಾಗಬೇಕು. ಇದರಿಂದ ಜನಸಾಮಾನ್ಯರಿಗೆ ನ್ಯಾಯಾಂಗದ ಬಗೆಗಿನ ಗೌರವ ಇನ್ನಷ್ಟು ಹೆಚ್ಚಾಗುತ್ತದೆ” ಎಂದರು.

ಹಿರಿಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರು “ಕೋವಿಡ್‌ ಸಂದರ್ಭದಲ್ಲಿ ನ್ಯಾಯಾಲಯಗಳು ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಮೂಲಕ ಕಕ್ಷಿದಾರರಿಗೆ ನ್ಯಾಯದಾನ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ” ಎಂದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಮಾತನಾಡಿ “ಸಂಘದ ಸದಸ್ಯರು ಇನ್ನು ಮುಂದೆ ತಮ್ಮ ಕುಂದು ಕೊರತೆಗಳನ್ನು ಇ–ಗ್ರೀವೆನ್ಸ್‌ ಪೋರ್ಟಲ್‌ ಮುಖಾಂತರ ದಾಖಲಿಸಬಹುದಾಗಿದೆ” ಎಂದರು.

Also Read
ಉನ್ನತಾಧಿಕಾರ ಸಮಿತಿಯು ಆಡಳಿತ ಸುಧಾರಣೆಗೆ ಮಾಡಿರುವ ಶಿಫಾರಸ್ಸುಗಳನ್ನು ಎಎಬಿ ಪರಿಶೀಲಿಸಲಿ: ಹೈಕೋರ್ಟ್‌

“ಸಂಘಕ್ಕೆ ಆಗಬೇಕಾದ ಕೆಲಸಗಳು, ಸೌಲಭ್ಯಗಳು ಅಥವಾ ಪೋಸ್ಟಿಂಗ್‌ ಸಮಸ್ಯೆ ಇದ್ದಲ್ಲಿ ಅವುಗಳನ್ನು ಪೋರ್ಟಲ್‌ ಮುಖಾಂತರ ಲಾಗಿನ್‌ ಆಗಿ ಸಂಘದ ಗಮನಕ್ಕೆ ತರಬಹುದು. ಗ್ರಾಹಕ ವ್ಯಾಜ್ಯಗಳ ನ್ಯಾಯಾಲಯ, ಭೂ ಕಬಳಿಕೆ ನ್ಯಾಯಾಲಯ, ವಾಣಿಜ್ಯ ನ್ಯಾಯಾಲಯ ಇತ್ಯಾದಿ ಬೇರೆ ಬೇರೆ ವಿಚಾರಣಾಧೀನ ನ್ಯಾಯಾಲಯಗಳಲ್ಲಿನ ಸಮಸ್ಯೆಗಳ ಬಗ್ಗೆಯೂ ವಕೀಲರು ಸಂಘದ ಗಮನಕ್ಕೆ ತಂದಲ್ಲಿ ಅವುಗಳನ್ನು ಪರಿಹರಿಸಲು ಮೊದಲ ಬಾರಿಗೆ ಇಂತಹ ತಂತ್ರಜ್ಞಾನ ರೂಪಿಸಲಾಗಿದೆ” ಎಂದು ವಿವರಿಸಿದರು.

ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಸಂಘದ ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ, ವಕೀಲರು ಇದ್ದರು.

Related Stories

No stories found.
Kannada Bar & Bench
kannada.barandbench.com