ಕಾನೂನು ಕಾಲೇಜುಗಳ ಪರಿಶೀಲನಾ ವರದಿಯನ್ನು ತನ್ನ ವೆಬ್‌ತಾಣದಲ್ಲಿ ಪ್ರಕಟಿಸುವಂತೆ ಭಾರತೀಯ ವಕೀಲರ ಪರಿಷತ್ತಿಗೆ ಕೇಂದ್ರ ಮಾಹಿತಿ ಆಯೋಗ ನಿರ್ದೇಶಿಸಿದೆ [ಪ್ರಸೂನ್ ಶೇಖರ್ ವರ್ಸಸ್ ಸಿಪಿಐಒ].
ಭಾರತೀಯ ವಕೀಲರ ಪರಿಷತ್ತು (ಬಿಸಿಐ) ತನ್ನ ಅಂತರ್ಜಾಲ ತಾಣದಲ್ಲಿ ಕಾನೂನು ಕಾಲೇಜುಗಳ ಕುರಿತಾದ ಪರಿಶೀಲನಾ ವರದಿಯನ್ನು ಪ್ರಕಟಿಸುವುದರಿಂದ ವಿದ್ಯಾರ್ಥಿ ಸಮುದಾಯಕ್ಕೆ ವಿಶೇಷವಾಗಿ ಅನುಕೂಲವಾಗಲಿದೆ. ಅಲ್ಲದೆ, ಈ ನಿಟ್ಟಿನಲ್ಲಿ ಮಾಹಿತಿ ಹಕ್ಕಿನಡಿ ಮಾಹಿತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆಯಲ್ಲಿಯೂ ಗಣನೀಯ ಇಳಿಕೆಯಾಗಲಿದೆ ಎಂದು ಮೇ 25 ರಂದು ನೀಡಲಾಗಿರುವ ಆದೇಶದಲ್ಲಿ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಮಾಹಿತಿ ಆಯುಕ್ತರಾದ ಸರೋಜ್ ಪುನ್ಹಾನಿ ಅವರು ಹೇಳಿದ್ದಾರೆ.
ಬಿಸಿಐ ಪರಿಶೀಲನೆಯ ನಂತರ ಮಾನ್ಯತೆ ರದ್ದುಗೊಂಡ ಅಥವಾ ಕಲಿಕೆಗೆ ಯೋಗ್ಯವಲ್ಲ ಎಂದು ತೀರ್ಮಾನಿಸಲಾದ ಕಾನೂನು ಕಾಲೇಜುಗಳ ಮಾಹಿತಿಯನ್ನು ನೀಡುವಂತೆ ಕೋರಿ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ (ಎಫ್‌ಎಎ) ಪ್ರಸೂನ್ ಶೇಖರ್ ಎನ್ನುವ ವಿದ್ಯಾರ್ಥಿ ಮನವಿ ಸಲ್ಲಿಸಿದ್ದರು. ಆದರೆ, ಇದನ್ನು ಎಫ್‌ಎಎ ಕಟುವಾಗಿ ತಿರಸ್ಕರಿಸಿ ಆದೇಶಿಸಿತ್ತು. ಈ ಆದೇಶದ ವಿರುದ್ಧ ಅರ್ಜಿದಾರರು ಸಿಐಸಿಗೆ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಕೇಂದ್ರ ಮಾಹಿತಿ ಆಯೋಗವು ಎಫ್‌ಎಎಯ "ಅನುಚಿತ ವರ್ತನೆ"ಯ ಬಗ್ಗೆಯೂ ಕಟುವಾಗಿ ಆಕ್ಷೇಪಿಸಿತು. ಅರ್ಜಿದಾರರ ವಿರುದ್ಧ ಕೋಪಾವಿಷ್ಠವಾಗಿ ವಾಗ್ವಾದ ನಡೆಸಿದ ರೀತಿಯ ಬಗ್ಗೆ ತೀವ್ರ ಅಸಮಾಧಾನ ಸೂಚಿಸಿತು.