ಸೆಂಟ್ರಲ್ ವಿಸ್ತಾ ಯೋಜನೆ: ಸಾರ್ವಜನಿಕ ಸಹಭಾಗಿತ್ವ ಏಕಿರಬೇಕು ಎಂದು ವಿವರಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್

ʼಯೋಜನೆ ಸಂಬಂಧ ಕೇಂದ್ರ ಸರ್ಕಾರ ಪಾರಂಪರಿಕ ಸಮಿತಿಯನ್ನು ಸಂಪರ್ಕಿಸಬೇಕಿತ್ತು, ಆದರೆ ಹಾಗೆ ಮಾಡಿಲ್ಲʼ ಎಂದು ವಕೀಲ ದಿವಾನ್‌ ವಾದಿಸಿದರು.
Central Vista
Central Vista

ದೆಹಲಿಯಲ್ಲಿ ನೂತನ ಸಂಸತ್‌ ಭವನ ನಿರ್ಮಿಸುವ ಕೇಂದ್ರ ಸರ್ಕಾರದ ಸೆಂಟ್ರಲ್‌ ವಿಸ್ತಾ ಯೋಜನೆ ಕುರಿತಂತೆ ಸುಪ್ರೀಂಕೋರ್ಟಿಗೆ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಶ್ಯಾಮ್‌ ದಿವಾನ್‌ ಅವರು ಯೋಜನೆ ಜಾರಿಗೆ ತರುತ್ತಿರುವ ವಿಧಾನವನ್ನು ಹಲವು ಮಗ್ಗುಲುಗಳಲ್ಲಿ ಪ್ರಶ್ನಿಸಿದ್ದಾರೆ.

ಪಾರಂಪರಿಕ ಮಹತ್ವದ ಇಂತಹ ಯೋಜನೆಗಳಲ್ಲಿ ಸಾರ್ವಜನಿಕ ಸಹಭಾಗಿತ್ವ ಏಕೆ ಅಗತ್ಯ ಎನ್ನುವ ಬಗ್ಗೆ ಅವರು ಸುಪ್ರೀಂ ಕೋರ್ಟಿನ ಪೀಠದ ಮುಂದೆ ಗುರುವಾರ ವಾದಿಸಿದರು. ಕಾರ್ಯಾಂಗ ಇಂತಹ ನಿರ್ಧಾರ ಕೈಗೊಳ್ಳುವಾಗ ಪಾರದರ್ಶಕತೆಯ ಅಂಶ ಎಷ್ಟು ಮುಖ್ಯ ಎಂಬುದನ್ನು ಸಂಬಂಧಿತ ಕಾನೂನುಗಳ ಮೂಲಕ ವಿವರಿಸಿದರು. ʼಯೋಜನೆ ಸಂಬಂಧ ಕೇಂದ್ರ ಸರ್ಕಾರ ಪಾರಂಪರಿಕ ಸಮಿತಿಯನ್ನು ಸಂಪರ್ಕಿಸಬೇಕಿತ್ತು, ಆದರೆ ಹಾಗೆ ಮಾಡಿಲ್ಲ. ಯೋಜನೆ ಪರಿಕಲ್ಪನೆ ಹಂತದಲ್ಲಿರುವಾಗಲೇ ಸಮಿತಿಯೊಂದಿಗೆ ಸಮಾಲೋಚಿಸಬೇಕೇ ವಿನಾ ಅದು ಕಾರ್ಯರೂಪಕ್ಕೆ ಬಂದಾಗ ಅಲ್ಲʼ ಎಂದು ತಿಳಿಸಿದರು.

Also Read
‘ಸುಪ್ರೀಂ’ಗೆ ಪತ್ರ ಬರೆದ ಆಂಧ್ರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ: ಸಿಎಂ ಜಗನ್‌ ವಿರುದ್ಧ ಆರೋಪಗಳ ಸುರಿಮಳೆ

ಯೋಜನೆಗೆ ಅನುಮತಿ ನೀಡುವ ಮೊದಲು ಅತ್ಯಗತ್ಯವಾದ ಪರಿಸರ ಪರಿಣಾಮ ಮೌಲ್ಯಮಾಪನದಲ್ಲಿ ಭಾಗವಹಿಸಬೇಕೆಂಬ ಶಾಸನಬದ್ಧ ನಿಬಂಧನೆಗಳನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು. ಸಂಸತ್‌ ಭವನದ ಬಗ್ಗೆ ಇಂಗ್ಲೆಂಡಿನಲ್ಲಿ ಅಳವಡಿಸಿಕೊಂಡ ನೀತಿಯನ್ನು ಇದೇ ವೇಳೆ ಉಲ್ಲೇಖಿಸಿದ ಅವರು ಭಾರತದಲ್ಲಿ ಇಂತಹ ನೀತಿಯ ಕೊರತೆ ಇದೆ ಎಂದರು.

ಆಗ ನ್ಯಾ. ಎ ಎಂ ಖಾನ್ವಿಲ್ಕರ್‌ ಅವರಿದ್ದ ಪೀಠ, ʼನೀವು ಕಟ್ಟಡವನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂಬುದಾಗಿ ಅಭಿಪ್ರಾಯಪಟ್ಟಂತಿದೆ. ಆದರೆ (ಯೋಜನೆ) ಕಟ್ಟಡಕ್ಕೆ ಪೂರಕವಾಗಿರಬಹುದುʼ ಎಂದು ಅಭಿಪ್ರಾಯಪಟ್ಟಿತು.

ಅದಕ್ಕೆ ಪ್ರತಿಕ್ರಿಯಿಸಿದ ದಿವಾನ್‌ ʼಕೇಂದ್ರ ಲೋಕೋಪಯೋಗಿ ಇಲಾಖೆಗೆ (ಸಿಪಿಡಬ್ಲ್ಯೂಡಿ) ಇದು ಸ್ವಾಧೀನವೇ, ಪೂರಕ ಪ್ರಕ್ರಿಯೆಯೇ ಎಂಬ ವಿಚಾರ ತಿಳಿಯದು. ಟೆಂಡರ್‌ ಕರೆದಾಗ ಅವರಿಗೆ ಇದು ಗೊತ್ತಿರಲಿಲ್ಲ. ಇದು ದಾಖಲೆಗಳಿಂದಲೂ ವ್ಯಕ್ತವಾಗುತ್ತಿದೆ. ಬಳಕೆಯಲ್ಲಿರುವ ಪಾರಂಪರಿಕ ಕಟ್ಟಡಕ್ಕೆ ಸಂಬಂಧಿಸಿದಂತೆ ಅದನ್ನು ಬದಲಿಸಲಾಗುತ್ತದೆ. ಏಕೆಂದರೆ ಸಂಸತ್ತಿನ ಅಧಿವೇಶನ ಹೊಸ ಕಟ್ಟಡದಲ್ಲಿ ನಡೆಯಲಿದೆ. ಈಗಿನ ದೃಷ್ಟಿಕೋನದಲ್ಲಿ ಪ್ರಸ್ತುತ ಕಟ್ಟಡವನ್ನು ವಸ್ತುಸಂಗ್ರಹಾಲಯ ಅಥವಾ ಇನ್ನಾವುದಕ್ಕಾದರೂ ಬಳಸಬಹುದುʼ ಎಂದರು.

ಜೊತೆಗೆ ʼಸಂಸತ್‌ ಕಟ್ಟಡ 70 ವರ್ಷಗಳ ಜೀವಂತ ಇತಿಹಾಸ ಹೊಂದಿದೆ. ಅದು ಈಗ ವಿಶ್ವದ ಬೃಹತ್‌ ಪ್ರಜಾಪ್ರಭುತ್ವ ದೇಶದ ಪ್ರಮುಖ ಅಂಗವಾಗಿದೆʼ ಎಂದು ಅಭಿಪ್ರಾಯಪಟ್ಟರು. ಆದರೆ ಮಧ್ಯಪ್ರವೇಶಿಸಿದ ಪೀಠ, ʼಸಂಸತ್‌ ಕಟ್ಟಡ ಇಂಗ್ಲೆಂಡ್‌ ಸಂಸತಿನಷ್ಟು ಹಳೆಯದಲ್ಲ. ಭಾರತದಲ್ಲಿ ಪ್ರಸ್ತುತ ಈ ಸಂಬಂಧ ಯಾವುದೇ ಕಾಯಿದೆ ಇಲ್ಲ. ಆದರೆ ಭವಿಷ್ಯದಲ್ಲಿ ಸರ್ಕಾರ ಈ ಸಂಬಂಧ ಶಾಸನ ರೂಪಿಸಬಹುದುʼ ಎಂದಿತು. ಅಲ್ಲದೆ ದೆಹಲಿಯ ಇತಿಹಾಸ, ಪರಂಪರೆ ಹಾಗೂ ಸಾಂಸ್ಕೃತಿಕ ಮಹತ್ವವವನ್ನೂ ದಿವಾನ್ ಅವರು ಈ ಸಂದರ್ಭದಲ್ಲಿ ವಿವರಿಸಿದರು.

ವಿಚಾರಣೆಯನ್ನು ನ. 2ಕ್ಕೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com