ಎನ್‌ಸಿಎಲ್ಎಟಿ ಅಧ್ಯಕ್ಷ ನ್ಯಾ. ಚೀಮಾ ಸೆ. 20ರವರೆಗೆ ತಮ್ಮ ಹುದ್ದೆಯಲ್ಲಿ ಮುಂದುವರೆಯಲು ಅವಕಾಶ ನೀಡಿದ ಕೇಂದ್ರ

ಅಲ್ಲಿಯವರೆಗೆ ಪ್ರಸ್ತುತ ಅಧ್ಯಕ್ಷ ನ್ಯಾ. ಎಂ ವೇಣುಗೋಪಾಲ್ ಅವರನ್ನು ರಜೆ ಮೇಲೆ ತೆರಳುವಂತೆ ಸರ್ಕಾರ ಕೋರಿದೆ.
ಎನ್‌ಸಿಎಲ್ಎಟಿ ಅಧ್ಯಕ್ಷ ನ್ಯಾ. ಚೀಮಾ ಸೆ. 20ರವರೆಗೆ ತಮ್ಮ ಹುದ್ದೆಯಲ್ಲಿ ಮುಂದುವರೆಯಲು ಅವಕಾಶ ನೀಡಿದ ಕೇಂದ್ರ

ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣದ (NCLAT) ಮಾಜಿ ಹಂಗಾಮಿ ಅಧ್ಯಕ್ಷ, ನ್ಯಾ. ಎಐಎಸ್ ಚೀಮಾ ಅವರು ಸೆಪ್ಟೆಂಬರ್ 20ರವರೆಗೆ ಅಧಿಕಾರದಲ್ಲಿ ಮುಂದುವರೆಯಲು ತನ್ನ ಸಮ್ಮತಿ ಇದೆ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಕೇಂದ್ರ ಸರ್ಕಾರ ಚೀಮಾ ಅವರ ಸೇವೆಯನ್ನು ಹತ್ತು ದಿನಗಳ ಕಾಲ ಕಡಿತಗೊಳಿಸುವುದಕ್ಕೂ ಮೊದಲು ನಿಗದಿಯಂತೆ ಅವರು ಸೆ. 20ರಂದು ನಿವೃತ್ತಿಯಾಗಬೇಕಿತ್ತು.

ಬಾಕಿ ಇರುವ ತೀರ್ಪುಗಳನ್ನು ನೀಡಲು ಸೆಪ್ಟೆಂಬರ್ 20 ರವರೆಗೆ ಕಚೇರಿಗೆ ಹೋಗಲು ಅವಕಾಶವಿದೆ ಮತ್ತು ಅದರ ಆಧಾರದ ಮೇಲೆ ಅವರು ನಿವೃತ್ತಿ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ ಎಂದು ಅಟಾರ್ನಿ ಜನರಲ್ (ಎಜಿ) ಕೆಕೆ ವೇಣುಗೋಪಾಲ್ ಅವರು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠಕ್ಕೆ ತಿಳಿಸಿದರು. ಹಾಲಿ ಅಧ್ಯಕ್ಷ ಎಂ ವೇಣುಗೋಪಾಲ್ ಅವರನ್ನು ಅಲ್ಲಿಯವರೆಗೆ ರಜೆ ಮೇಲೆ ತೆರಳುವಂತೆ ಸೂಚಿಸಲಾಗುವುದು ಎಂದು ಎಜಿ ಮಾಹಿತಿ ನೀಡಿದ್ದಾರೆ.

ಈ ವಾದವನ್ನು ನ್ಯಾಯಾಲಯ ಒಪ್ಪಿದ್ದು ಅದಕ್ಕೆ ಅನುಗುಣವಾಗಿ ಆದೇಶ ನೀಡುವುದಾಗಿ ಹೇಳಿತು. ಈ ಆದೇಶ ಸಂದರ್ಭ ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿರುತ್ತದೆ ಎಂದು ಕೂಡ ಅದು ಸ್ಪಷ್ಟಪಡಿಸಿದೆ. ನಿಗದಿತ ನಿವೃತ್ತಿ ದಿನಕ್ಕಿಂತಲೂ ಹತ್ತು ದಿನ ಮೊದಲೇ ತಮ್ಮ ಅಧಿಕಾರಾವಧಿಯನ್ನು ಮೊಟಕುಗೊಳಿಸಿದ ನಡೆಯನ್ನು ಪ್ರಶ್ನಿಸಿ ನ್ಯಾ. ಚೀಮಾ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.

ವಿಚಾರಣೆಯ ಆರಂಭದ ಹಂತದಲ್ಲಿ ಚೀಮಾ ಅವರನ್ನು ಕಚೇರಿಗೆ ತೆರಳಲು ಬಿಡುವುದಿಲ್ಲ ಎಂದು ಎಜಿ ವಾದಿಸಿದರು. ಆದರೆ ಹಾಗೆ ಮಾಡದಿದ್ದರೆ ತೀರ್ಪು ನೀಡುವುದು ಬಾಕಿ ಉಳಿಯುತ್ತದೆ ಎಂದು ಹಿರಿಯ ನ್ಯಾಯವಾದಿ ಅರವಿಂದ್‌ ದಾತಾರ್‌ ತಿಳಿಸಿದರು. ಇದನ್ನು ಒಪ್ಪಿದ ಸಿಜೆಐ ರಮಣ ಅವರು ತೀರ್ಪುಗಳನ್ನು ನೀಡಬೇಕಿದೆ. ನೀವು ಹಿರಿಯ ನ್ಯಾಯವಾದಿಗಳಾಗಿದ್ದು ಅದು ನಿಮಗೆ ತಿಳಿದಿದೆ ಎಂದರು.

ಆದರೆ ಪ್ರಸ್ತುತ ಅಧ್ಯಕ್ಷರಿಗೆ (ನ್ಯಾ. ಎಂ ವೇಣುಗೋಪಾಲ್‌) ಇದು ಮುಜುಗರಕ್ಕೆ ಕಾರಣವಾಗಲಿದೆ ಎಂದು ಎಜಿ ಹೇಳಿದರು. ಆಗ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಉದ್ದೇಶಿಸಿ “ನಿಮ್ಮ ಆದೇಶಗಳು ಸಹ ಮುಜುಗರಕ್ಕೆ ಕಾರಣವಾಗಿವೆ. ಈ ಸನ್ನಿವೇಶ ಸೃಷ್ಟಿಯಾಗಲು ನೀವೇ ಹೊಣೆಗಾರರು ಎಂದು ಹೇಳಬೇಕಾಗುತ್ತದೆ” ಎಂದಿತು.

ಎನ್‌ಸಿಎಲ್‌ಎಟಿಯ ಹಂಗಾಮಿ ಅಧ್ಯಕ್ಷರಾಗಿದ್ದ ನ್ಯಾ. ಚೀಮಾ ಅವರ ಸ್ಥಾನಕ್ಕೆ ಮದ್ರಾಸ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯಾಗಿದ್ದ ಎಂ ವೇಣುಗೋಪಾಲ್ ಅವರನ್ನು ಸೆಪ್ಟೆಂಬರ್ 11 ರಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿತ್ತು.

ವಿಚಾರಣೆಯ ಒಂದು ಹಂತದಲ್ಲಿ ಕೇಂದ್ರದಿಂದ ಸೂಚನೆಗಳನ್ನು ಪಡೆಯಲು ಎಜಿ ಅವರು ಸಮಯಾವಕಾಶ ಕೇಳಿದರು. ಆಗ ನ್ಯಾಯಾಲಯ ವಿಚಾರಣೆಯನ್ನು ಕೆಲ ನಿಮಿಷಗಳವರೆಗೆ ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದಾಗ ಕಚೇರಿಯಲ್ಲಿ ಮುಂದುವರೆಯುವ ಚೀಮಾ ಅವರ ಮನವಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಎಜಿ ಹೇಳಿದರು.

ಬಾಂಬೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯಾಗಿದ್ದ ಚೀಮಾ ಅವರನ್ನು 2017ರಲ್ಲಿ ಎನ್‌ಸಿಎಲ್‌ಎಟಿ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. 2021ರ ಏಪ್ರಿಲ್‌ನಿಂದ ಅವರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಸೆ. 4ರಂದು ಅವರಿಗೆ ನೀಡಲಾದ ಪತ್ರದಲ್ಲಿ ಎನ್‌ಸಿಎಲ್‌ಎಟಿ ಸದಸ್ಯರಾಗಿ ನಾಲ್ಕು ವರ್ಷ ಪೂರೈಸಿದ ನಂತರ ತಮ್ಮ ಅಧಿಕಾರಾವಧಿ ಮುಕ್ತಾಯವಾಗಿದೆ ಎಂದು ತಿಳಿಸಿತ್ತು.

ನ್ಯಾಯಮಂಡಳಿಗಳ ಸುಧಾರಣೆ ಕಾಯಿದೆ- 2021ರ ಸೆಕ್ಷನ್ 5 ರ ಪ್ರಕಾರ ಅಧ್ಯಕ್ಷರಾಗಿ ನ್ಯಾಯಮೂರ್ತಿಗಳ ಅಧಿಕಾರಾವಧಿ ನಾಲ್ಕು ವರ್ಷ ಅಥವಾ ಅವರ ವಯೋಮಿತಿ 70 ವರ್ಷ ಮೀರದಂತೆ ಎಂದು ತಿಳಿಸಿದೆ. ಅದೇ ರೀತಿ, ನ್ಯಾಯಮಂಡಳಿಗಳ ಸದಸ್ಯರಿಗೆ, ಅಧಿಕಾರಾವಧಿಯನ್ನು ನಾಲ್ಕು ವರ್ಷಗಳು ಅಥವಾ 67 ವರ್ಷ ವಯೋಮಿತಿ ಮೀರದಂತೆ ಎಂದು ತಿಳಿಸಿದೆ. ಚೀಮಾ ಪ್ರಕರಣದಲ್ಲಿ ಕೇಂದ್ರ ಸರ್ಕಾರ 4 ವರ್ಷಗಳ ಅಧಿಕಾರಾವಧಿ ಜಾರಿಗೊಳಿಸಲು ಯತ್ನಿಸಿತ್ತು.

Related Stories

No stories found.
Kannada Bar & Bench
kannada.barandbench.com