ಭಾರತದ 49ನೇ ಸಿಜೆಐ ಆಗಿ ನ್ಯಾ. ಯು ಯು ಲಲಿತ್‌ ನೇಮಕ; ಕೇಂದ್ರ ಸರ್ಕಾರದಿಂದ ಅಧಿಸೂಚನೆ

ಹಾಲಿ ಸಿಜೆಐ ಎನ್‌ ವಿ ರಮಣ ಅವರು ಆಗಸ್ಟ್‌ 26ರಂದು ನಿವೃತ್ತಿ ಹೊಂದುತ್ತಿದ್ದು, ಅವರ ಸ್ಥಾನವನ್ನು ನ್ಯಾ. ಲಲಿತ್‌ ಅವರು ತುಂಬಲಿದ್ದಾರೆ.
Justice UU Lalit
Justice UU Lalit

ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಯು ಯು ಲಲಿತ್‌ ಅವರು ನೇಮಕಗೊಂಡಿದ್ದಾರೆ. ಕೇಂದ್ರ ಸರ್ಕಾರವು ಈ ಕುರಿತು ಬುಧವಾರ ಅಧಿಸೂಚನೆ ಹೊರಡಿಸಿದೆ.

ಹಾಲಿ ಸಿಜೆಐ ಎನ್‌ ವಿ ರಮಣ ಅವರು ಆಗಸ್ಟ್‌ 26ರಂದು ನಿವೃತ್ತಿ ಹೊಂದುತ್ತಿದ್ದು, ಅವರ ಸ್ಥಾನವನ್ನು ನ್ಯಾ. ಲಲಿತ್‌ ಅವರು ತುಂಬಲಿದ್ದಾರೆ. ಸಿಜೆಐ ಆಗಿ ನ್ಯಾ. ಲಲಿತ್‌ ಅವರು ಅಲ್ಪ ಅವಧಿಗೆ ಕಾರ್ಯನಿರ್ವಹಿಸಲಿದ್ದು, ಇದೇ ವರ್ಷದ ನವೆಂಬರ್‌ 8ರಂದು ನಿವೃತ್ತಿ ಹೊಂದಲಿದ್ದಾರೆ.

ಸಂಪ್ರದಾಯದಂತೆ ಸಿಜೆಐ ಎನ್‌ ವಿ ರಮಣ ಅವರು ಕಳೆದ ವಾರ ನ್ಯಾ. ಲಲಿತ್‌ ಅವರ ಹೆಸರನ್ನು ಸಿಜೆಐ ಹುದ್ದೆಗೆ ಶಿಫಾರಸ್ಸು ಮಾಡಿದ್ದರು.

“ಸಂವಿಧಾನದ 124ನೇ ವಿಧಿಯ ಕಲಂ (2)ರ ಅಡಿ ದೊರೆತಿರುವ ಅಧಿಕಾರ ಚಲಾಯಿಸಿ ರಾಷ್ಟ್ರಪತಿಗಳು ನ್ಯಾ. ಲಲಿತ್‌ ಅವರನ್ನು 2022ರ ಆಗಸ್ಟ್‌ 27ರಿಂದ ಅನ್ವಯವಾಗುವಂತೆ ಭಾರತದ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿದ್ದಾರೆ” ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮತ್ತು ಹಾಲಿ ಹಿರಿಯ ವಕೀಲರಾದ ಯು ಆರ್‌ ಲಲಿತ್‌ ಅವರ ಪುತ್ರರಾದ ನ್ಯಾ. ಲಲಿತ್‌ ಅವರು 1957ರ ನವೆಂಬರ್‌ 9ರಂದು ಜನಿಸಿದರು. 1983ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡ ಅವರು 1985ರ ಡಿಸೆಂಬರ್‌ವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡಿದ್ದರು. 1986ರಲ್ಲಿ ದೆಹಲಿಗೆ ಸ್ಥಳಾಂತರಗೊಂಡ ನ್ಯಾ.ಲಲಿತ್‌ ಅವರು 2004ರ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್‌ ಹಿರಿಯ ವಕೀಲರಾಗಿ ಪದೋನ್ನತಿ ಪಡೆದಿದ್ದರು.

2014ರ ಆಗಸ್ಟ್‌ 13ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡ ನ್ಯಾ. ಲಲಿತ್‌ ಅವರು ಇದೇ ವರ್ಷದ ನವೆಂಬರ್‌ 8ರಂದು ನಿವೃತ್ತಿ ಹೊಂದಲಿದ್ದಾರೆ.

Related Stories

No stories found.
Kannada Bar & Bench
kannada.barandbench.com