
ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನಾಗಿ ವಿ ಕಾಮೇಶ್ವರ ರಾವ್ ಅವರನ್ನು ಗುರುವಾರ ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್ ವಿ ಅಂಜಾರಿಯಾ ಅವರನ್ನು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಮಾಡಿದ ಹಿನ್ನೆಲೆಯಲ್ಲಿ ನ್ಯಾ. ಕಾಮೇಶ್ವರ ರಾವ್ ಅವರ ನೇಮಕಾತಿ ಆದೇಶ ಹೊರಬಿದ್ದಿದೆ.
“ಸಂವಿಧಾನದ 223ನೇ ವಿಧಿಯಡಿ ಪದತ್ತವಾಗಿರುವ ಅಧಿಕಾರ ಬಳಸಿ ರಾಷ್ಟ್ರಪತಿ ಅವರು ನ್ಯಾ. ವಿ ಕಾಮೇಶ್ವರ ರಾವ್ ಅವರು ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಲು ನೇಮಕ ಮಾಡಲಾಗಿದೆ” ಎಂದು ಕಾನೂನು ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ನ್ಯಾ. ಕಾಮೇಶ್ವರ ರಾವ್ ಅವರನ್ನು ಅವರ ಮಾತೃ ಹೈಕೋರ್ಟ್ ದೆಹಲಿಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸನ್ನು ಕೇಂದ್ರ ಇನ್ನಷ್ಟೇ ಅನುಮತಿಸಬೇಕಿದೆ.