ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಮೂವರ ಪದೋನ್ನತಿಗೆ ಕೇಂದ್ರ ಅಸ್ತು: ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ

ಈ ನೇಮಕಾತಿಯೊಂದಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 34ಕ್ಕೆ ಏರುವ ಮೂಲಕ ಪೂರ್ಣ ಪ್ರಮಾಣದಲ್ಲಿ ನ್ಯಾಯಮೂರ್ತಿಗಳ ನೇಮಕವಾದಂತಾಗುತ್ತದೆ.
Justice Satish Chandra Sharma, Justice Augustine George Masih, Justice Sandeep Mehta
Justice Satish Chandra Sharma, Justice Augustine George Masih, Justice Sandeep Mehta

ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ, ಆಗಸ್ಟಿನ್ ಜಾರ್ಜ್ ಮಸಿಹ್ ಮತ್ತು ಸಂದೀಪ್ ಮೆಹ್ತಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಇಂದು ಸಂಜೆ 4.15ಕ್ಕೆ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಈ ನೇಮಕಾತಿಯೊಂದಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯೆ 34ಕ್ಕೆ ಏರುವ ಮೂಲಕ ಪೂರ್ಣ ಪ್ರಮಾಣದಲ್ಲಿ ನ್ಯಾಯಮೂರ್ತಿಗಳ ನೇಮಕವಾದಂತಾಗುತ್ತದೆ.

ನ್ಯಾಯಮೂರ್ತಿಗಳಾದ ಶರ್ಮಾ, ಮಸಿಹ್ ಮತ್ತು ಮೆಹ್ತಾ ಅವರು ಕ್ರಮವಾಗಿ ದೆಹಲಿ, ರಾಜಸ್ಥಾನ ಹಾಗೂ ಗುವಾಹಟಿ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ನ್ಯಾ. ಶರ್ಮಾ ಅವರ ಮೂಲ ಉಚ್ಚ ನ್ಯಾಯಾಲಯ ಮಧ್ಯಪ್ರದೇಶ ಹೈಕೋರ್ಟ್ ಆಗಿದ್ದು, ನ್ಯಾಯಮೂರ್ತಿಗಳಾದ ಮಸಿಹ್ ಮತ್ತು ಮೆಹ್ತಾ ಕ್ರಮವಾಗಿ ಪಂಜಾಬ್ ಮತ್ತು ರಾಜಸ್ಥಾನ ಹೈಕೋರ್ಟ್‌ಗಳಿಂದ ಬಂದವರಾಗಿದ್ದಾರೆ. ಮೂಲ ಹೈಕೋರ್ಟ್‌ಗಳ ವಿಷಯದಲ್ಲಿ ವೈವಿಧ್ಯತೆ, ಸಾಮಾಜಿಕ ಹಿನ್ನೆಲೆ ಇತ್ಯಾದಿಗಳನ್ನು ಪರಿಗಣಿಸಿ ಹಿರಿತನ, ಅರ್ಹತೆ, ಕಾರ್ಯಕ್ಷಮತೆ, ಸಮಗ್ರತೆಯ ಆಧಾರದಲ್ಲಿ ಮೂವರು ನ್ಯಾಯಮೂರ್ತಿಗಳ ಪದೋನ್ನತಿಗೆ ಶಿಫಾರಸು ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಕೊಲಿಜಿಯಂ ತನ್ನ ನಿರ್ಣಯದಲ್ಲಿ ತಿಳಿಸಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳು ಬಾಕಿ ಉಳಿದಿದ್ದು ನ್ಯಾಯಮೂರ್ತಿಗಳ ಕೆಲಸದ ಹೊರೆ ಸಾಕಷ್ಟುಹೆಚ್ಚಿರುವುದರಿಂದ ಎಲ್ಲಾ ನ್ಯಾಯಮೂರ್ತಿ ಹುದ್ದೆಗಳು ಭರ್ತಿಯಾಗುವ ಅವಶ್ಯಕತೆ ಇದೆ ಎಂದು ಕೊಲಿಜಿಯಂ ತಿಳಿಸಿತ್ತು.

ಜನವರಿ 18, 2008 ರಂದು ಮಧ್ಯಪ್ರದೇಶ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡ ನ್ಯಾ. ಸತೀಶ್‌ ಚಂದ್ರ ಶರ್ಮಾ ತೆಲಂಗಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು. ಬಳಿಕ ಅವರನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು. ಅವರು ಕಳೆದ ಎರಡು ವರ್ಷಗಳಿಂದ ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದೇಶದ ಎಲ್ಲಾ ಹೈಕೋರ್ಟ್‌ ನ್ಯಾಯಮೂರ್ತಿಗಳಲ್ಲಿ ನ್ಯಾ. ಶರ್ಮಾ ಎರಡನೇ ಅತಿ ಹಿರಿಯರಾಗಿದ್ದು ಮಧ್ಯಪ್ರದೇಶ ಹೈಕೋರ್ಟ್‌ಗೆ ಸಂಬಂಧಿಸಿದಂತೆ ಮೊದಲ ಹಿರಿಯರಾಗಿದ್ದಾರೆ.

ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡ ನ್ಯಾ ಎ ಜಿ ಮಸಿಹ್‌ ಅವರಿಗೆ ಮೇ 30, 2023ರಂದು ರಾಜಸ್ಥಾನ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಲಾಯಿತು. ದೇಶದ ಎಲ್ಲಾ ಹೈಕೋರ್ಟ್‌ ನ್ಯಾಯಮೂರ್ತಿಗಳಲ್ಲಿ ಅವರು ಏಳನೇ ಹಿರಿಯ ನ್ಯಾಯಮೂರ್ತಿಯಾಗಿದ್ದು ತಮ್ಮ ಪೋಷಕ ಹೈಕೋರ್ಟ್‌ನ ಅತಿ ಹಿರಿಯ ನ್ಯಾಯಮೂರ್ತಿ ಎನಿಸಿಕೊಂಡಿದ್ದಾರೆ.

ನ್ಯಾ. ಮೆಹ್ತಾ ಅವರು ಮೇ 30, 2011 ರಂದು ರಾಜಸ್ಥಾನ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅವರು ಕಳೆದ ಫೆಬ್ರವರಿ 15ರಿಂದ ಗುವಾಹಟಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ದೇಶದ ಎಲ್ಲಾ ಹೈಕೋರ್ಟ್‌ ನ್ಯಾಯಮೂರ್ತಿಗಳಲ್ಲಿ 23 ನೇ ಹಿರಿಯರಾಗಿರುವ ಅವರು ಪೋಷಕ ಹೈಕೋರ್ಟ್‌ನ ಅತಿ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ.

Related Stories

No stories found.
Kannada Bar & Bench
kannada.barandbench.com