ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರ ಸೇವಾವಧಿಯನ್ನು ಒಂದು ವರ್ಷ ವಿಸ್ತರಿಸಿದ ಕೇಂದ್ರ

ಕೆ ಕೆ ವೇಣುಗೋಪಾಲ್ (89) ಅವರನ್ನು ಅಟಾರ್ನಿ ಜನರಲ್‌ ಆಗಿ ಜೂನ್‌ 2017ರಂದು ನೇಮಿಸಲಾಗಿತ್ತು. ಮುಕುಲ್‌ ರೋಹಟ್ಗಿ ಅವರು ರಾಜಿನಾಮೆಯ ನಂತರ ಸ್ಥಾನ ತೆರವಾಗಿತ್ತು.
Attorney General KK Venugopal
Attorney General KK Venugopal
Published on

ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರ ಸೇವಾವಧಿಯನ್ನು ಜೂ.30, 2022ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ವೇಣುಗೋಪಾಲ್‌ ಅವರನ್ನು ಮೂರು ವರ್ಷಗಳ ಅವಧಿಗೆ ಅಟಾರ್ನಿ ಜನರಲ್‌ ಆಗಿ ಕೇಂದ್ರ ಸರ್ಕಾರವು ಜು.1, 2017 ರಂದು ನೇಮಕ ಮಾಡಿತ್ತು. ಹಿಂದಿನ ವರ್ಷ ಸಹ ಅವರ ಸೇವಾವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿತ್ತು.

ಈ ಹಿಂದೆ ಎಜಿ ಆಗಿ ಕಾರ್ಯನಿರ್ವಹಿಸಿದ್ದ ಮುಕುಲ್ ರೋಹಟ್ಗಿ ಅವರು ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ ನಂತರ ತೆರವಾದ ಸ್ಥಾನಕ್ಕೆ ವೇಣುಗೋಪಾಲ್‌ ಅವರನ್ನು ನೇಮಿಸಲಾಗಿತ್ತು. ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಎರಡನೇ ಅವಧಿಗೆ ಆಯ್ಕೆಯಾದ ನಂತರ ವೇಣುಗೋಪಾಲ್ ಅವರನ್ನು ಮುಂದುವರೆಸಲಾಗಿತ್ತು.

ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರದಲ್ಲಿಯೂ ಸಹ ಎಜಿ ಹುದ್ದೆಗೆ ವೇಣುಗೋಪಾಲ್ ಅವರ ಹೆಸರು ಕೇಳಿಬಂದಿತ್ತು. ಹಿರಿಯ ವಕೀಲ ಫಾಲಿ ನಾರಿಮನ್‌ ಅವರು ಎಜಿ ಹುದ್ದೆಯನ್ನು ತಿರಸ್ಕರಿಸಿದ ನಂತರ ಸೋಲಿ ಸೊರಾಬ್ಜಿ ಹಾಗೂ ವೇಣುಗೋಪಾಲ್‌ ಅವರ ಹೆಸರುಗಳನ್ನು ಪರಿಗಣಿಸಲಾಗಿತ್ತು. ಸೊರಾಬ್ಜಿ ಅವರು ಆಗ ಹುದ್ದೆಯನ್ನು ಒಪ್ಪಿಕೊಂಡಿದ್ದರು.

ವೇಣುಗೋಪಾಲ್‌ ಅವರು ಆರು ದಶಕಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಮೊರಾರ್ಜಿ ದೇಸಾಯಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ಕಾರ್ಯನಿರ್ವಹಿಸಿದ್ದರು. ಸಾಂವಿಧಾನಿಕ ಕಾಯಿದೆಗಳ ಬಗ್ಗೆ ವಿಶೇಷ ಪರಿಣತಿ ಹೊಂದಿರುವ ವೇಣುಗೋಪಾಲ್‌ ಅವರು ಮದ್ರಾಸ್‌ ವಕೀಲ ವೃಂದವನ್ನು ಸೇರಿದ 25 ವರ್ಷಗಳ ನಂತರ ಚೆನ್ನೈನಿಂದ ದೆಹಲಿಗೆ ಸ್ಥಳಾಂತರಗೊಂಡರು.

Kannada Bar & Bench
kannada.barandbench.com