
ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಅನ್ನು ಮಂಡಿಸುತ್ತಿದೆ. ಅದು ಕೌಶಲ್ಯದ ಆಟವೇ ಇರಲಿ ಅಥವಾ ಅವಕಾಶದ ಆಟವೇ ಇರಲಿ ಇಲ್ಲವೇ ಎರಡರ ಮಿಶ್ರಣವಾಗಿದ್ದರೂ ಹಣಕಾಸು ವಹಿವಾಟು ನಡೆಯುತ್ತಿದ್ದರೆ ಆ ಎಲ್ಲ ವಿಧದ ಆಟಗಳನ್ನು ಆನ್‌ಲೈನ್ ಹಣದ ಆಟ ಎಂದು ವರ್ಗೀಕರಿಸಿ ನಿಷೇಧಿಸಲು ಮಸೂದೆ ಯತ್ನಿಸುತ್ತದೆ.
ಮಸೂದೆ ಜಾರಿಗೆ ಬಂದರೆ, ಕೌಶಲ್ಯದ ಆಟಗಳು ಮತ್ತು ಅವಕಾಶದ ಆಟಗಳ ನಡುವೆ ದೀರ್ಘಕಾಲದಿಂದ ಇದ್ದ ಕಾನೂನು ವ್ಯತ್ಯಾಸ ಇಲ್ಲವಾಗಿ ಹಣವನ್ನು ಪಣಕ್ಕಿಡುವ ಅಥವಾ ಆರ್ಥಿಕ ಲಾಭದ ನಿರೀಕ್ಷೆ ಒಳಗೊಂಡಿರುವ ಯಾವುದೇ ಆಟ ಕಾನೂನುಬಾಹಿರವಾಗುತ್ತದೆ.
ಆನ್‌ಲೈನ್ ಹಣದ ಆಟಗಳ ಕಾರ್ಯಾಚರಣೆ ಮತ್ತು ಅವುಗಳಿಗೆ ಸಂಬಂಧಿಸಿದ ಹಣಕಾಸು ವಹಿವಾಟನ್ನು ಸಂಜ್ಞೇಯ ಮತ್ತು ಜಾಮೀನು ರಹಿತ ಅಪರಾಧ ಎಂದು ಕಟ್ಟುನಿಟ್ಟಾಗಿ ವರ್ಗೀಕರಿಸಲು ಮಸೂದೆ ಹೊರಟಿದೆ.
ಕಾನೂನು ಉಲ್ಲಂಘಿಸಿದ ಶಂಕಿತರನ್ನು ವಾರೆಂಟ್ ಇಲ್ಲದೆ ಬಂಧಿಸಲು; ಮ್ಯಾಜಿಸ್ಟ್ರೇಟ್‌ನಿಂದ ಪೂರ್ವಾನುಮತಿ ಪಡೆಯದೆ ನೇರವಾಗಿ ತನಿಖೆ ಆರಂಭಿಸಲು; ಡಿಜಿಟಲ್ ಸಾಧನಗಳ ಶೋಧ ಮತ್ತು ವಶಕ್ಕೆ ಕಾರ್ಯಾಚರಣೆ ಕೈಗೊಳ್ಳಲು ಹಾಗೂ ಪಾಸ್‌ವರ್ಡ್ ಅಥವಾ ಭದ್ರತಾ ಸಂಕೇತಗಳನ್ನು ಭೇದಿಸಲು ಇದು ಕಾನೂನು ಜಾರಿ ಸಂಸ್ಥೆಗಳಿಗೆ ಅವಕಾಶ ಒದಗಿಸಲಿದೆ.
ಪ್ರಸ್ತಾವಿತ ಕಾನೂನು ರಾಷ್ಟ್ರೀಯ ಆನ್‌ಲೈನ್ ಗೇಮಿಂಗ್ ನಿಯಂತ್ರಕ ಪ್ರಾಧಿಕಾರ ಸ್ಥಾಪಿಸುವ ಗುರಿಯನ್ನೂ ಹೊಂದಿದೆ.
ನಗದು ಆಧಾರಿತ ಗೇಮಿಂಗ್ ನಿಷೇಧ: ಎಲ್ಲಾ ಬಗೆಯ ಆನ್‌ಲೈನ್ ಹಣದ ಆಟಗಳ ಮೇಲೆ ಸಂಫೂರ್ಣ ನಿಷೇಧ. ರಮ್ಮಿ ಅಥವಾ ಫ್ಯಾಂಟಸಿ ಕ್ರೀಡೆಗಳಂತಹ ಕೌಶಲ್ಯ ಆಧಾರಿತ ಸ್ವರೂಪಗಳು ನಗದು ಭಾಗವಹಿಸುವಿಕೆಯನ್ನು ಒಳಗೊಂಡಿದ್ದರೆ ಅವುಗಳಿಗೂ ನಿಷೇಧ.
ಕಠಿಣ ದಂಡ: ನಿಯಮ ಉಲ್ಲಂಘಿಸಿದವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ₹1 ಕೋಟಿ ವರೆಗೆ ದಂಡ ವಿಧಿಸಲಾಗಬಹುದು. ಪುನರಾವರ್ತಿತ ಅಪರಾಧಿಗಳಿಗೆ ₹2 ಕೋಟಿಯವರೆಗೆ ದಂಡ. ಹಣದ ಆಟ ಪ್ರಚುರ ಪಡಿಸಿದವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ₹50 ಲಕ್ಷ ದಂಡ.
ಹಣಕಾಸು ವ್ಯವಹಾರ ನಿರ್ಬಂಧ: ಬ್ಯಾಂಕುಗಳು, ಪಾವತಿ ಪೂರೈಕೆದಾರರು ಮತ್ತಿತರ ಹಣಕಾಸು ಮಧ್ಯವರ್ತಿಗಳು ಜೂಜಾಟಕ್ಕೆ ಸಂಬಂಧಿಸಿದ ವಹಿವಾಟುಗಳಿಗೆ ಹಣ ಒದಗಿಸದಂತೆ ನಿಷೇಧ.
ನಿಯಂತ್ರಣ ಸಂಸ್ಥೆ: ಆನ್‌ಲೈನ್ ಗೇಮಿಂಗ್ ನಿಯಂತ್ರಿಸಲು ರಾಷ್ಟ್ರೀಯ ಗೇಮಿಂಗ್ ಪ್ರಾಧಿಕಾರ ಸ್ಥಾಪಿಸಲಾಗುತ್ತದೆ. ಗೇಮ್‌ಗಳನ್ನು ನೋಂದಣಿ ಮಾಡುವುದು, ನಿಯಮ ಪಾಲನೆ ಪರಿಶೀಲಿಸುವುದು ಇದರ ಪ್ರಮುಖ ಹೊಣೆ.
ಇ-ಸ್ಪೋರ್ಟ್ಸ್‌ಗೆ ಮಾನ್ಯತೆ: ಕ್ರೀಡಾ ನಿಯಮಗಳ ಅಡಿಯಲ್ಲಿ ಆಡುವ ಸ್ಪರ್ಧಾತ್ಮಕ ಡಿಜಿಟಲ್ ಆಟಗಳನ್ನು ಕಾನೂನುಬದ್ಧ ಕ್ರೀಡೆ ಎಂದು ಗುರುತಿಸಿ ತರಬೇತಿ ಅಕಾಡೆಮಿಗಳು, ಸಂಶೋಧನಾ ಕೇಂದ್ರಗಳು ಮತ್ತು ರಾಷ್ಟ್ರೀಯ ಕ್ರೀಡಾ ನೀತಿಯಲ್ಲಿ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗುವುದು.
ಸಾಮಾಜಿಕ ಮತ್ತು ಶೈಕ್ಷಣಿಕ ಆಟಗಳ ಪ್ರಚಾರ: ಸಾಮಾಜಿಕ ಅಥವಾ ಶೈಕ್ಷಣಿಕ ವೇದಿಕೆಗಳಂತಹ ಹಣವನ್ನು ಪಣಕ್ಕಿಡದ ಆನ್‌ಲೈನ್ ಆಟಗಳನ್ನು ಮನರಂಜನೆ, ಕಲಿಕೆ ಮತ್ತು ಕೌಶಲ್ಯ ನಿರ್ಮಾಣಕ್ಕಾಗಿ ಬೆಂಬಲಿಸಿ ಪ್ರಚಾರ ಮಾಡಲಾಗುತ್ತದೆ.
ಜೂಜಾಟದ ಗಂಭೀರ ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ಹಾನಿಯನ್ನು ಎತ್ತಿ ತೋರಿಸುವ ಮೂಲಕ ಸರ್ಕಾರ ಪ್ರಸ್ತಾವಿತ ನಿಷೇಧವನ್ನು ಸಮರ್ಥಿಸಿಕೊಂಡಿದೆ.