ಹೆಚ್ಚುವರಿ ಆಮ್ಲಜನಕ ಸಂಗ್ರಹ ಇದ್ದಿದ್ದರೆ ಚಾಮರಾಜನಗರ ದುರಂತ ಸಂಭವಿಸುತ್ತಿರಲಿಲ್ಲ: ಕರ್ನಾಟಕ ಹೈಕೋರ್ಟ್‌

ಸುಪ್ರೀಂ ಕೋರ್ಟಿನ ನಿರ್ದೇಶನದ ಹೊರತಾಗಿಯೂ ಕರ್ನಾಟಕದಲ್ಲಿ ಏಕೆ ಹೆಚ್ಚುವರಿ ಆಮ್ಲಜನಕ ಸಂಗ್ರಹವಿರಲಿಲ್ಲ ಎನ್ನುವ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ವಿವರಣೆ ನೀಡಿಲ್ಲ ಎನ್ನುವುದನ್ನು ಪೀಠವು ಗಮನಿಸಿತು.
Oxygen
Oxygen

ರಾಜ್ಯದಲ್ಲಿ ಹೆಚ್ಚುವರಿಯಾಗಿ ಆಮ್ಲಜನಕದ ಸಂಗ್ರಹವಿದ್ದಿದ್ದರೆ (ಬಫರ್‌ ಸ್ಟಾಕ್‌) ಚಾಮರಾಜನಗರದ ಕೋವಿಡ್ ಚಿಕಿತ್ಸಾ ‌ಕೇಂದ್ರದಲ್ಲಿ ಆಮ್ಲಜನಕದ ಕೊರತೆಯಿಂದ 24 ಮಂದಿ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಬುಧವಾರ ಅಭಿಪ್ರಾಯಪಟ್ಟಿತು.

ಹೆಚ್ಚುವರಿ ಇರಲಿ, ಕೋವಿಡ್‌ ಸಂಕಷ್ಟದ ಈ ಸಂದರ್ಭದಲ್ಲಿ ಅಗತ್ಯವಿರುವ ಪ್ರಮಾಣದ ಆಮ್ಲಜನಕವನ್ನು ಸಹ ಕೇಂದ್ರವು ರಾಜ್ಯಕ್ಕೆ ವಿತರಣೆ ಮಾಡಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾ. ಅರವಿಂದ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠವು ಹೇಳಿತು.

“ಒಂದು ವೇಳೆ, ಹೆಚ್ಚುವರಿ ಆಮ್ಲಜನಕ ಸಂಗ್ರಹ (ಬಫರ್‌ ಸ್ಟಾಕ್) ಇದ್ದಿದ್ದರೆ ಚಾಮರಾಜನಗರದ ದುರ್ಘಟನೆ ಸಂಭವಿಸುತ್ತಿರಲಿಲ್ಲ,” ಎಂದ ನ್ಯಾಯಾಲಯವು ಮುಂದುವರೆದು, ಸುಪ್ರೀಂ ಕೋರ್ಟ್‌ನ ನಿರ್ದೇಶನದ ನಂತರವೂ ಸಹ ಕರ್ನಾಟಕದಲ್ಲಿ ಏಕೆ ಹೆಚ್ಚುವರಿ ಆಮ್ಲಜನಕದ ಸಂಗ್ರಹವಿಲ್ಲ ಎನ್ನುವುದಕ್ಕೆ ಭಾರತ ಸರ್ಕಾರದ ಬಳಿ ಯಾವುದೇ ವಿವರಣೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿತು.

ರಾಜ್ಯದಲ್ಲಿನ ಕೋವಿಡ್‌ ನಿರ್ವಹಣೆಯಲ್ಲಿನ ಲೋಪಗಳ ಕುರಿತು ನ್ಯಾಯಾಲಯಕ್ಕೆ ಬರೆಯಲಾಗಿದ್ದ ಎರಡು ಪತ್ರಗಳನ್ನು ಆಧರಿಸಿ ಸ್ವಯಂಪ್ರೇರಣೆಯಿಂದ ಅರ್ಜಿ ದಾಖಲಿಸಿಕೊಂಡು ಹೈಕೋರ್ಟ್‌ ವಿಚಾರಣೆ ಕೈಗೊಂಡಿದೆ. ಕೋವಿಡ್‌ನಿಂದಾಗಿ ಉಂಟಾಗಿರುವ ಪ್ರಸಕ್ತ ಗಂಭೀರ ಸನ್ನಿವೇಶವನ್ನು ಪೀಠವು ಪರಿಗಣಿಸಿದೆ.

ವಿಚಾರಣೆ ವೇಳೆ, ಕೇಂದ್ರವು ರಾಜ್ಯದ ಪಾಲಿನ ಆಮ್ಲಜನಕದ ಮಿತಿಯನ್ನು 865 ಮೆ.ಟನ್‌ನಿಂದ 965ಕ್ಕೆ ಏರಿಸಿರುವುದಾಗಿ ತಿಳಿಸಿತು. ಆದರೆ, ಏಪ್ರಿಲ್‌ 29ರ ಅಂದಾಜಿನಂತೆ ರಾಜ್ಯಕ್ಕೆ 1162 ಮೆಟ್ರಿಕ್‌ ಟನ್‌ ಆಮ್ಲಜನಕದ ಅವಶ್ಯಕತೆ ಇತ್ತು. ಮೇ 4ರಂತೆ 1792 ಮೆ. ಟನ್‌ ಅಗತ್ಯವಿದೆ ಎನ್ನುವ ಅಂಶವು ಪೀಠದ ಗಮನಕ್ಕೆ ಬಂದಿತು. ಇದನ್ನು ಪರಿಗಣಿಸಿದ ಪೀಠವು, ರಾಜ್ಯವು 1792 ಮೆ.ಟನ್‌ಗಿಂತ ಹೆಚ್ಚಿನ ಆಮ್ಲಜನಕವನ್ನು ಕೇಳಿದರೆ ಅದು ಸಮರ್ಥನೀಯ ಎಂದಿತು.

ಅಂತಿಮವಾಗಿ ಪೀಠವು ಈ ಕೆಳಗಿನ ನಿರ್ದೇಶನಗಳನ್ನು ನೀಡಿತು:

  • ರಾಜ್ಯವು ಏ.30ರಂದು ಹೆಚ್ಚುವರಿ ಆಮ್ಲಜನಕಕ್ಕಾಗಿ ನೀಡಿರುವ ಮನವಿಯನ್ನು ಕೇಂದ್ರವು ಮರು ಪರಿಗಣಿಸಬೇಕು.

  • ಮುಂದೆ ಬೇಕಾಗಲಿರುವ ಆಮ್ಲಜನಕದ ಅಗತ್ಯವನ್ನು ಗಮನದಲ್ಲಿರಿಸಿಕೊಂಡು ಒಂದು ವಾರಕ್ಕೆ ಅಗತ್ಯವಾದಷ್ಟು ಆಮ್ಲಜನಕಕ್ಕೆ ಹೆಚ್ಚುವರಿ ಮನವಿಯನ್ನು ರಾಜ್ಯವು ಕೇಂದ್ರಕ್ಕೆ ಸಲ್ಲಿಸಬೇಕು. 4 ದಿನಗಳೊಳಗೆ ಈ ಕುರಿತು ನಿರ್ಧಾರ ಕೈಗೊಳ್ಳಬೇಕು.

  • ಅಲ್ಲಿಯವರೆಗೆ, ಕೇಂದ್ರವು ಆಮ್ಲಜನಕದ ಮಿತಿಯನ್ನು 1,162 ಮೆ.ಟನ್‌ಗೆ ಹೆಚ್ಚಿಸಬೇಕು.

  • ಆಮ್ಲಜನಕದ ಕೊರತೆಯಿಂದ ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಾವುಗಳು ಸಂಭವಿಸಿರುವುದರಿಂದ ಸ್ಥಾಯಿ ವಕೀಲರು ತಕ್ಷಣವೇ ಕೇಂದ್ರ ಸರ್ಕಾರದ ಪರಿಗಣನೆಗೆ ಈ ಆದೇಶ ತಲುಪಿಸಬೇಕು.

ಇದಲ್ಲದೆ, ರೆಮ್‌ಡಿಸಿವಿರ್‌ ಕೊರತೆಯ ಬಗ್ಗೆಯೂ ಗಮನಹರಿಸಿದ ಪೀಠವು, “ರೆಮ್‌ಡಿಸಿವಿರ್‌ ನ ಇಂದಿನ ಲಭ್ಯತೆಯು ಬೇಡಿಕೆಯ ಮೂರನೇ ಒಂದು ಭಾಗದಷ್ಟೂ ಇಲ್ಲ. ಕೇಂದ್ರ ಸರ್ಕಾರವು ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಇನ್ನೆರಡು ದಿನಗಳಲ್ಲಿ ಸಕಾರಾತ್ಮಕ ನಿರ್ಣಯ ಕೈಗೊಳ್ಳಬೇಕು” ಎಂದು ಆದೇಶಿಸಿತು.

Related Stories

No stories found.
Kannada Bar & Bench
kannada.barandbench.com