ಪರೀಕ್ಷಾ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆಗೆ ಶಿಕ್ಷೆ: ಕಾನೂನು ಜಾರಿಗೆ ತಂದ ಕೇಂದ್ರ ಸರ್ಕಾರ

ಅಕ್ರಮ ನಡೆಸಿದವರಿಗೆ 3ರಿಂದ 5 ವರ್ಷ ಜೈಲು, ₹10 ಲಕ್ಷದವರೆಗೆ ದಂಡ, ಸೇವೆ ಪೂರೈಸುವವರೇ ಅಕ್ರಮ ಎಸಗಿದರೆ ₹1 ಕೋಟಿವರೆಗೆ ದಂಡ ವಿಧಿಸಲಾಗುತ್ತದೆ. ಸಂಘಟಿತ ಅಪರಾಧದಲ್ಲಿ ಭಾಗಿಯಾದವರು ಜೈಲು ಶಿಕ್ಷೆ ಜೊತೆಗೆ ₹1 ಕೋಟಿ ದಂಡ ತೆರಬೇಕಾಗುತ್ತದೆ.
ಪರೀಕ್ಷಾ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆಗೆ ಶಿಕ್ಷೆ: ಕಾನೂನು ಜಾರಿಗೆ ತಂದ ಕೇಂದ್ರ ಸರ್ಕಾರ
Published on

ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯುವ ಸಂಬಂಧ ಕೇಂದ್ರ ಸರ್ಕಾರ 2024ರ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯಿದೆಯನ್ನು ಜೂನ್ 21ರಂದು ಜಾರಿಗೆ ತಂದಿದೆ.

ಈ ಕಾಯಿದೆ ಸಾರ್ವಜನಿಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಉತ್ತರ ಪತ್ರಿಕೆ  ತಿರುಚುವಿಕೆ, ಆಸನ ವ್ಯವಸ್ಥೆ ತಿರುಚುವುದು, ಹಣಕ್ಕಾಗಿ ನಕಲಿ ಜಾಲತಾಣ ಸೃಷ್ಟಿ ಮತ್ತು ನಕಲಿ ಪರೀಕ್ಷೆಗಳ ಆಯೋಜನೆ ಮುಂತಾದ ಹಲವಾರು ಅನ್ಯಾಯದ ಚಟುವಟಿಕೆಗಳಿಗೆ ಕಡಿವಾಣ ಹಾಕಲಿದೆ.

ಈ ಕಾನೂನಿಗೆ ಸಂಬಂಧಪಟ್ಟ ಮಸೂದೆಯನ್ನು ಫೆಬ್ರವರಿ 5ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಫೆಬ್ರವರಿ 9ರಂದು ರಾಜ್ಯಸಭೆ  ಮಸೂದೆಗೆ ಅಂಗೀಕಾರ ನೀಡಿತ್ತು.

ಫೆಬ್ರವರಿ 12ರಂದು ರಾಷ್ಟ್ರಪತಿಗಳ ಅಂಕಿತ ಪಡೆದಿದ್ದ ಮಸೂದೆಯನ್ನು ಜೂನ್ 21ರಂದು (ಶುಕ್ರವಾರ) ಕೇಂದ್ರ ಸರ್ಕಾರ ಅಧಿಕೃತ ಗೆಜೆಟ್‌ನಲ್ಲಿ ಅಧಿಸೂಚಿಸಿದೆ.  

ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶಾತಿ ಪದವಿ ಪರೀಕ್ಷೆಗೆ ಸಂಬಂಧಿಸಿದಂತೆ ವ್ಯಾಪಕ ಅಕ್ರಮ ನಡೆದಿರುವ ಬೆನ್ನಲ್ಲೇ ಕಾನೂನು ಜಾರಿಗೆ ಬಂದಿದೆ.

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ–ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET ಪರೀಕ್ಷೆ) ಕೂಡ ಇದೇ ರೀತಿಯ ಕಳವಳಗಳ ಕಾರಣದಿಂದಾಗಿ ಇತ್ತೀಚೆಗೆ ರದ್ದುಗೊಂಡಿತ್ತು.

ಎಲ್ಲಾ ಪರೀಕ್ಷಾ ಅಕ್ರಮಗಳನ್ನು ಸಂಜ್ಞೇಯ ಹಾಗೂ ಜಾಮೀನು ರಹಿತ ಸಂಯೋಜಿತ ಅಪರಾಧವಾಗಿ ಕಾನೂನು ಗುರುತಿಸಲಿದ್ದು ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ಎಸಗುವವರಿಗೆ 3ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 10 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ.

ಪರೀಕ್ಷಾ ಸಂಬಂಧಿತ ಸೇವಾ ಪೂರೈಕೆದಾರರು ಅಕ್ರಮ ಎಸಗಿರುವುದು ಕಂಡುಬಂದಲ್ಲಿ ಅವರಿಗೆ ₹1 ಕೋಟಿವರೆಗೆ ದಂಡ ವಿಧಿಸಬಹುದಾಗಿದೆ. ಅಲ್ಲದೆ ಇಡೀ ಪರೀಕ್ಷೆಗೆ ತಗಲುವ ವೆಚ್ಚವನ್ನು ಅಂತಹ ಸೇವಾ ಪೂರೈಕೆದಾರರಿಂದ ವಸೂಲಿ ಮಾಡಲಾಗುತ್ತದೆ. ನಾಲ್ಕು ವರ್ಷಗಳವರೆಗೆ ಯಾವುದೇ ಸಾರ್ವಜನಿಕ ಪರೀಕ್ಷೆಯನ್ನು ನಡೆಸದಂತೆ ನಿರ್ಬಂಧವನ್ನೂ ವಿಧಿಸಲಾಗುತ್ತದೆ.

ಇದಲ್ಲದೆ, ಸೇವಾ ಪೂರೈಕೆದಾರ ಘಟಕದ ಹಿರಿಯ ಅಧಿಕಾರಿಗಳು (ನಿರ್ದೇಶಕರು, ಹಿರಿಯ ನಿರ್ವಹಣೆ, ಉಸ್ತುವಾರಿ ವ್ಯಕ್ತಿಗಳು) ಮೂರರಿಂದ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ  ಅನುಭವಿಸಲಿದ್ದು ಅಕ್ರಮದ ಭಾಗವಾಗಿರುವುದು ಕಂಡುಬಂದಲ್ಲಿ ₹1 ಕೋಟಿಯವರೆಗೆ ದಂಡ ವಿಧಿಸಲಾಗುತ್ತದೆ.

ಸಾರ್ವಜನಿಕ ಪರೀಕ್ಷಾ ಪ್ರಾಧಿಕಾರ ಮತ್ತು ಸೇವಾ ಪೂರೈಕೆದಾರರನ್ನು ಒಳಗೊಂಡಂತೆ ಯಾವುದೇ ವ್ಯಕ್ತಿ ಅಥವಾ ಗುಂಪು ಪರೀಕ್ಷಾ ನಡಾವಳಿಗೆ ಸಂಬಂಧಿಸಿದಂತೆ ಸಂಘಟಿತ ಅಪರಾಧ ಎಸಗಿರುವುದು ಕಂಡುಬಂದರೆ, ಅಂತಹವರಿಗೆ ಐದರಿಂದ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ ₹1 ಕೋಟಿ ದಂಡ ವಿಧಿಸಲಾಗುತ್ತದೆ.

ದಂಡ ಪಾವತಿಸದಿದ್ದರೆ, ಭಾರತೀಯ ನ್ಯಾಯ ಸಂಹಿತೆ- 2023ರ ಪ್ರಕಾರ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಅಪರಾಧಗಳಿಗೆ ಭಾರತೀಯ ನ್ಯಾಯ ಸಂಹಿತೆ ಜಾರಿಗೆ ಬರುವವರೆಗೆ, ಭಾರತೀಯ ದಂಡ ಸಂಹಿತೆಯಡಿ (ಐಪಿಸಿ) ಶಿಕ್ಷೆ ಅನ್ವಯವಾಗುತ್ತದೆ.

Kannada Bar & Bench
kannada.barandbench.com