ದೇಶದ ಗಮನ ಸೆಳೆದಿದ್ದ 2ಜಿ ತರಂಗಾಂತರ ಕುರಿತ ತೀರ್ಪಿನಲ್ಲಿ 122 ಟೆಲಿಕಾಂ ಪರವಾನಗಿಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಹತ್ತು ವರ್ಷಗಳ ನಂತರ ಸಾರ್ವಜನಿಕ ಹಿತಾಸಕ್ತಿ ಅಥವಾ ಆರ್ಥಿಕ ಇಲ್ಲವೇ ತಾಂತ್ರಿಕ ಕಾರಣಗಳನ್ನು ಒಳಗೊಂಡಿರುವ ಪ್ರಕರಣಗಳಲ್ಲಿ ತರಂಗಾಂತರದ ಆಡಳಿತಾತ್ಮಕ ಹಂಚಿಕೆಗೆ ಅನುಮತಿ ಕೋರಿ ಕೇಂದ್ರ ಸರ್ಕಾರ ಇದೀಗ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ [ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
2012ರ ತೀರ್ಪಿನ ಸ್ಪಷ್ಟೀಕರಣ ಕೋರಿ ಸಲ್ಲಿಸಿದ ತೀರ್ಪಿನಿಂದಾಗಿ ಕಡ್ಡಾಯವಾಗಿರುವ ಸ್ಪರ್ಧಾತ್ಮಕ ಹರಾಜುಗಳು ಸದಾ ತಾಂತ್ರಿಕ ಇಲ್ಲವೇ ಆರ್ಥಿಕ ಕಾರಣಗಳಿಗೆ ಸೂಕ್ತವಲ್ಲ ಎಂದು ಅರ್ಜಿಯಲ್ಲಿ ಕೇಂದ್ರ ಸರ್ಕಾರ ವಾದಿಸಿದೆ.
ಭದ್ರತೆ, ಸುರಕ್ಷತೆ, ವಿಪತ್ತು ಸನ್ನದ್ಧತೆ ಮುಂತಾದ ವಾಣಿಜ್ಯೇತರ ಸಾರ್ವಭೌಮ ಕಾರ್ಯಗಳನ್ನು ನಿರ್ವಹಿಸುವುದಕ್ಕಾಗಿ ತರಂಗಾಂತರವನ್ನು ಬಳಸಲು ಅನುವು ಮಾಡಿಕೊಡುವಂತೆ ಸರ್ಕಾರ ಕೋರಿದೆ.
"ಅಂತಹ ವಾಣಿಜ್ಯೇತರ ಬಳಕೆ ಎಂಬುದು ಸಾಮಾನ್ಯ ಒಳಿತಿಗೆ ಒಳಪಡುವ ವ್ಯಾಪ್ತಿಯೊಳಗೆ ಬರುತ್ತದೆ ... ವಿಶೇಷ ಮೋಡ್ ಸಂಬಂಧಿತ ನಿಯೋಜನೆಯಲ್ಲಿ (ಉದಾಹರಣೆಗೆ, ಕ್ಯಾಪ್ಟಿವ್ ಬಳಕೆ, ರೇಡಿಯೋ ಬ್ಯಾಕ್‌ಹಾಲ್ ಅಥವಾ ಒಂದು ಬಾರಿ ಅಥವಾ ವಿರಳ ಬಳಕೆಗೆ) ಹರಾಜು ಪ್ರಕ್ರಿಯೆ ತರುವುದು ಕೆಲವು ಸಮಸ್ಯೆಗಳಿಗೆ ಕಾರಣವಾಗಬಹುದು” ಎಂದು ಅದು ಹೇಳಿದೆ.
ಬೇಡಿಕೆ ಎಂಬುದು ಪೂರೈಕೆಗಿಂತ ಕಡಿಮೆಯಿರುವಾಗ ಇಲ್ಲವೇ ಬಾಹ್ಯಾಕಾಶ ಸಂವಹನದ ಸಂದರ್ಭದಲ್ಲಿ ತರಂಗಾಂತರದ ಆಡಳಿತಾತ್ಮಕ ಹಂಚಿಕೆಯ ಅಗತ್ಯವಿದೆ ಎಂದು ಕೇಂದ್ರ ಸಚಿವಾಲಯ ಹೇಳಿದೆ.
ಅಂತಹ ಸಂದರ್ಭಗಳಲ್ಲಿ, ವಿಶೇಷ ನಿಯೋಜನೆಯ ಏಕೈಕ ಉದ್ದೇಶಕ್ಕಾಗಿ ಸಣ್ಣ ಬ್ಲಾಕ್‌ಗಳಾಗಿ ವಿಭಜಿಸುವುದಕ್ಕಿಂತ ಹೆಚ್ಚಾಗಿ ತರಂಗಾಂತರವನ್ನು ಹೆಚ್ಚಿನ ಭಾಗೀದಾರರಿಂದ ಹಂಚಿಕೊಳ್ಳಲು ಇದು ಹೆಚ್ಚು ಸೂಕ್ತ ಮತ್ತು ಪರಿಣಾಮಕಾರಿಯಾಗಿದೆ ಎಂದು ಅರ್ಜಿ ತಿಳಿಸಿದೆ.
₹1.76 ಲಕ್ಷ ಕೋಟಿ 2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಅಧಿಕಾರಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ಅಂಗೀಕರಿಸಿದ ಒಂದು ತಿಂಗಳ ನಂತರ ಕೇಂದ್ರ ಸರ್ಕಾರ ಈ ಅರ್ಜಿ ಸಲ್ಲಿಸಿದೆ.