ಸಂವಿಧಾನದ ಮೂಲತತ್ವ ರದ್ದುಗೊಳಿಸಲು ಮುಂದಾದ ಕೇಂದ್ರ: ರಾಜ್ಯಪಾಲರ ಪ್ರಕರಣದಲ್ಲಿ ಕರ್ನಾಟಕ ಸೇರಿ 3 ರಾಜ್ಯಗಳ ಕಳವಳ

ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಬಹುದೇ ಎಂಬ ಕುರಿತು ರಾಷ್ಟ್ರಪತಿಯವರು ಸಲ್ಲಿಸಿದ್ದ ಶಿಫಾರಸ್ಸಿನ ವಿಚಾರಣೆ ಪೀಠದಲ್ಲಿ ನಡೆಯಿತು.
India map and Supreme Court
India map and Supreme Court
Published on

ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸುವ ಮೂಲಕ ಕೇಂದ್ರ ಸರ್ಕಾರ ಸಂವಿಧಾನದ ಮೂಲ ತಿರುಳಿನ ರದ್ದತಿಗೆ ಮುಂದಾಗಿದೆ ಎಂದು ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳು ಬುಧವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿವೆ. 

ರಾಜ್ಯಪಾಲರು ಸಂವಿಧಾನದ ಕಾರ್ಯನಿರ್ವಹಣೆಯಲ್ಲಿ ಅಡಚಣೆಯಾಗಲು ಅನುವು ಮಾಡಿಕೊಡುವಂತಹ ಬಲೆಗೆ ಬೀಳದಂತೆ ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ನ್ಯಾಯಾಲಯವನ್ನು ಕೋರಿದವು. ಇದೇ ವೇಳೆ, ರಾಜ್ಯ ಸರ್ಕಾರಗಳನ್ನು ಸ್ಥಳೀಯ ಸಂಸ್ಥೆಗಳಂತೆ ಪರಿಣಿಸಬಾರದು ಎಂದು ಕೂಡ ಹೇಳಿದವು. ಇಂಡಿಯಾ ಒಕ್ಕೂಟದ ಪಕ್ಷಗಳಾದ ಕಾಂಗ್ರೆಸ್‌ ಮತ್ತು ತೃಣಮೂಲ ಕಾಂಗ್ರೆಸ್‌ ಪಕ್ಷಗಳು ಕ್ರಮವಾಗಿ ಈ ರಾಜ್ಯಗಲ್ಲಿ ಅಧಿಕಾರದಲ್ಲಿವೆ.

Also Read
ರಾಜ್ಯಪಾಲರ ಅಧಿಕಾರ ಕುರಿತ ತೀರ್ಪು ಯಾವ ಪಕ್ಷ ಅಧಿಕಾರದಲ್ಲಿದೆ ಎಂಬುದನ್ನು ಅವಲಂಬಿಸಿರುವುದಿಲ್ಲ: ಸುಪ್ರೀಂ ಕೋರ್ಟ್

ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಬಹುದೇ ಎಂಬ ಕುರಿತು  ಸಂವಿಧಾನದ 143 ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್‌ನ ಸಲಹೆಯನ್ನು ಕೋರಿ ರಾಷ್ಟ್ರಪತಿಯವರು ಮಾಡಿದ್ದ ಶಿಫಾರಸ್ಸಿನ ವಿಚಾರಣೆ ನಡೆಸಿದ  ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ವಿಕ್ರಮ್ ನಾಥ್ , ಪಿ ಎಸ್ ನರಸಿಂಹ ಹಾಗೂ ಅತುಲ್ ಎಸ್. ಚಂದೂರ್ಕರ್ ಅವರಿದ್ದ ಸಾಂವಿಧಾನಿಕ ಪೀಠದೆದುರು ಈ ವಾದ ಮಂಡಿಸಲಾಯಿತು.

ಕರ್ನಾಟಕ ಸರ್ಕಾರದ ವಾದ

ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಗೋಪಾಲ್‌ ಸುಬ್ರಮಣಿಯಂ ಅವರು ಮಂಡಿಸಿದ ವಾದದ ಪ್ರಮುಖಾಂಶಗಳು ಹೀಗಿವೆ:

  • ಕೇಂದ್ರ ಸರ್ಕಾರ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವ ಮೂಲಕ ಸಂವಿಧಾನದ ಮೂಲ ರಚನೆಯ ಅಂಶವಾದ ʼಸಚಿವ ಸಂಪುಟ ಆಧಾರಿತ ಸರ್ಕಾರʼ ಎಂಬ ಸಂವಿಧಾನದ ಮೂಲ ರಚನೆಯ ತತ್ವವನ್ನು ಹಾಳು ಮಾಡಲು ಯತ್ನಿಸುತ್ತಿದೆ.

  • ಆ ಮೂಲಕ ಶಾಸಕಾಂಗದ ಹೊಣೆಗಾರಿಕೆಯನ್ನು ರದ್ದುಗೊಳಿಸುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ.

  • ರಾಜ್ಯಪಾಲರು ಇಲ್ಲವೇ ರಾಷ್ಟ್ರಪತಿಯವರಿಗೆ ಅನಿಯಂತ್ರಿತ ಅಧಿಕಾರ ಇಲ್ಲ.

  • ಅವರು ವಿಧಾನ ಮಂಡಲಕ್ಕೆ ಜವಾಬ್ದಾರರಾಗಿರುವ ಸರ್ಕಾರದ ಸಲಹೆ ಮೇರೆಗೆ ಮಾತ್ರ ಕೆಲಸ ಮಾಡಬೇಕು.

ಪ. ಬಂಗಾಳ ಸರ್ಕಾರದ ವಾದ

ಟಿಎಂಸಿ ನೇತೃತ್ವದ ಪ. ಬಂಗಾಳ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಮಂಡಿಸಿದ ವಾದದ ಪ್ರಮುಖ ಅಂಶಗಳು ಹೀಗಿವೆ:

  • ಈ ಬಗೆಯ ಪ್ರಕರಣ ನಿರ್ಧರಿಸುವಾಗ ವಾಸ್ತವಾಂಶಗಳು ಇಲ್ಲದಿರುವ ಕೇವಲ ಕಾಲ್ಪನಿಕ ಸಂಗತಿಯನ್ನು ಎದುರಿಸುವ ಸಂದರ್ಭದಲ್ಲಿ ನ್ಯಾಯಾಲಯ ಜಾಗರೂಕವಾಗಿರಬೇಕು.

  • ಸಂವಿಧಾನ ಎಂಬುದು ಸಜೀವ ದಾಖಲೆ. ಅದು ಇತಿಹಾಸದಿಂದ ಹುಟ್ಟಿಕೊಂಡಿದ್ದರೂ ಭವಿಷ್ಯಕ್ಕೆ ನಿಷ್ಠವಾಗಿರುತ್ತದೆ. ನ್ಯಾಯಾಲಯವೇ ಸಂವಿಧಾನವನ್ನು ವ್ಯಾಖ್ಯಾನಿಸುವುದರಿಂದ ಅದೇ ಭವಿಷ್ಯವಾಗಿದೆ.

  • ರಾಜ್ಯಪಾಲರು ಸಂವಿಧಾನದ ಕಾರ್ಯನಿರ್ವಹಣೆಯಲ್ಲಿ ಅಡಚಣೆಯಾಗಲು ಅನುವು ಮಾಡಿಕೊಡಲಿದ್ದು ಆ ಬಲೆಗೆ ಸುಪ್ರೀಂ ಕೋರ್ಟ್ ಬೀಳಬಾರದು.

ಹಿಮಾಚಲ ಪ್ರದೇಶ ಸರ್ಕಾರದ ವಾದ

ಹಿಮಾಚಲ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಆನಂದ್ ಶರ್ಮಾ ಅವರ ವಾದದ ಪ್ರಮುಖ ಸಂಗತಿಗಳು ಹೀಗಿವೆ:

  • ಸಂವಿಧಾನದ ವಿಚಾರಕ್ಕೆ ಬಂದಾಗ ನ್ಯಾಯಾಲಯಗಳೇ ಅಂತಿಮ ತೀರ್ಪುಗಾರರಾಗಿದ್ದು ಅದು ಭಾರತೀಯ ಗಣರಾಜ್ಯದ ಶಕ್ತಿ .

  • ರಾಜ್ಯಪಾಲರುಗಳು ವೈಸರಾಯ್‌ ಅಥವಾ ಗವರ್ನರ್‌ ಜನರಲ್‌ಗಳಲ್ಲ. ಅವರು ಸಚಿವ ಸಂಪುಟದ ಸಲಹೆ ಮತ್ತು ಮಾರ್ಗದರ್ಶನಕ್ಕೆ ಬದ್ಧರಾಗಿರಬೇಕು.

  • ರಾಷ್ಟ್ರಪತಿ ಅಥವಾ ಗವರ್ನರ್‌ಗೆ ವಿಧಾನಮಂಡಲ ರೂಪಿಸುವಲ್ಲಿ ಅಥವಾ ಅದರ ಅಧಿವೇಶನ ನಡೆಸುವಲ್ಲಿ ಯಾವುದೇ ಸ್ವತಂತ್ರ ಪಾತ್ರವಿಲ್ಲ.

  • ವಿಧಾನ ಮಂಡಲವೇ ಶ್ರೇಷ್ಠವಾದುದು.

  • ಜನರ ಇಚ್ಛೆಗೆ ವಿರುದ್ಧವಾಗಿ ರಾಜ್ಯಪಾಲರ ಹುದ್ದೆ ಬಳಕೆಯಾಗಬಾರದು.

  • ರಾಜ್ಯ ಸರ್ಕಾರಗಳನ್ನು ಮುನಿಸಿಪಾಲಿಟಿಗಳಂತೆ ನಡೆಸಿಕೊಳ್ಳಲಾಗದು. ಅವುಗಳಿಗೆ ತಮ್ಮದೇ ಆದ ಸ್ವತಂತ್ರ ಸ್ಥಾನ ಇದ್ದು ಅದನ್ನು ಉಳಿಸಿ ಗೌರವಿಸಬೇಕು.

Kannada Bar & Bench
kannada.barandbench.com