ಕೇಂದ್ರ ನೀಡಿದ ಬರ ಪರಿಹಾರದ ಮೊತ್ತ ಅತ್ಯಲ್ಪ: ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಸರ್ಕಾರದ ವಾದ

ಅಂತರ್ಸಚಿವಾಲಯದ ತಜ್ಞರ ಸಮಿತಿ ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಲ್ಲಿಸಿದ್ದ ವರದಿಯ ಪ್ರತಿಯನ್ನು ನೀಡುವಂತೆ ರಾಜ್ಯ ಸರ್ಕಾರ ಕೋರಿದ ಹಿನ್ನೆಲೆಯಲ್ಲಿ ವರದಿ ನೀಡುವಂತೆ ಕೇಂದ್ರಕ್ಕೆ ಪೀಠ ಸೂಚಿಸಿತು.
ಕೇಂದ್ರ ನೀಡಿದ ಬರ ಪರಿಹಾರದ ಮೊತ್ತ ಅತ್ಯಲ್ಪ: ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಸರ್ಕಾರದ ವಾದ
Published on

ತೀವ್ರ ಬರಗಾಲದಿಂದ ಕಂಗೆಟ್ಟಿರುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ನೀಡಿರುವ ₹ 3454 ಕೋಟಿ ಮೊತ್ತ ತಾನು ಕೇಳಿದ ಪರಿಹಾರಧನಕ್ಕಿಂತಲೂ ಅತ್ಯಂತ ಕಡಿಮೆಯಾಗಿದೆ ಎಂದು ರಾಜ್ಯ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿತು.  

ಕೇಂದ್ರ ಸರ್ಕಾರ ನೇಮಿಸಿದ್ದ ಅಂತರ್ಸಚಿವಾಲಯದ ತಜ್ಞರ ಸಮಿತಿ ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಲ್ಲಿಸಿದ್ದ ವರದಿಯ ಪ್ರತಿಯನ್ನು ನೀಡುವಂತೆ ರಾಜ್ಯ ಸರ್ಕಾರ ಕೋರಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ಸಂದೀಪ್‌ ಮೆಹ್ತಾ ಅವರಿದ್ದ ಪೀಠ ವರದಿ ಸಲ್ಲಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿ ಪ್ರಕರಣವನ್ನು ಮೇ 6ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ನ್ಯಾ. ಗವಾಯಿ ಅವರು “ಈಗಾಗಲೇ ಸ್ವಲ್ಪ ಹಣ ಬಿಡುಗಡೆ ಮಾಡಿರಬೇಕು ಅಲ್ಲವೇ?" ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು "ಹೌದು ಸುಮಾರು 3400 ಕೋಟಿಯಷ್ಟು ಹಣ ಬಿಡುಗಡೆ ಮಾಡಲಾಗಿದೆ" ಎಂದರು. ಅಂತರ್ಸಚಿವಾಲಯದ ತಜ್ಞರ ಸಮಿತಿ ನೀಡಿದ್ದ ವರದಿ ಆಧಾರದಲ್ಲಿ ಸಚಿವರ ಸಮಿತಿ ಪರಿಹಾರ ಘೋಷಿಸಲಾಗಿದೆ ಎಂದು ವಿವರಿಸಿದರು.

ಇತ್ತ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ “ರಾಜ್ಯ ಸರ್ಕಾರ ₹ 18,000 ಕೋಟಿ ಪರಿಹಾರ ಕೇಳಿತ್ತು. ಆದರೆ ಬಿಡುಗಡೆ ಮಾಡಿರುವ ಮೊತ್ತ ತೀರಾ ಕಡಿಮೆಯಾಗಿದೆ. ಬರಕ್ಕೆ ತುತ್ತಾದ ಜನರ ಜೀವನೋಪಾಯಕ್ಕಾಗಿ, ₹ 12,577 ಪರಿಹಾರ ಕೋರಲಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆಯಡಿ ಜೀವನೋಪಾಯಕ್ಕಾಗಿ ಪರಿಹಾರ ನೀಡಲು ಅವಕಾಶ ಇದ್ದರೂ ಅದನ್ನು ಪರಿಗಣಿಸಿಲ್ಲ” ಎಂದರು.

ತಜ್ಞರ ಸಮಿತಿಯ ವರದಿ ನಮ್ಮೊಂದಿಗೆ ಇಲ್ಲ. ನಾವು ಬೇಡಿಕೆ ಇಟ್ಟಿದ್ದ ಎಲ್ಲಾ ಮೊತ್ತವನ್ನು ಕೇಂದ್ರ ಸರ್ಕಾರ ನೀಡಿಲ್ಲ. ವರದಿಯನ್ನು ನ್ಯಾಯಾಲಯಕ್ಕೆ ನೀಡಬಹುದಾಗಿದೆ ಎಂದರು.

ಈ ಹಂತದಲ್ಲಿ ವರದಿ ಸಲ್ಲಿಕೆಗೆ ಕಾಲಾವಕಾಶ ಬೇಕು ಎಂದು ವೆಂಕಟರಮಣಿ ಅವರು ಕೇಳಿದರು. ಆದರೆ ಹೆಚ್ಚಿನ ಸಮಯಾವಕಾಶ ನೀಡಲಾಗದು ಎಂದ ಪೀಠ ಮುಂದಿನ ಸೋಮವಾರದೊಳಗೆ ವರದಿಯ ಪ್ರತಿಯ ಅಧಿಕೃತ ಸಲ್ಲಿಕೆಗೆ ಸೂಚಿಸಿತು.

Kannada Bar & Bench
kannada.barandbench.com