ಹಿಂದೂ ವಿವಾಹ ಕಾಯಿದೆಯಡಿ ವಿವಾಹಕ್ಕೆ ಮಾನ್ಯತೆ ದೊರೆಯಲು ವಿಧ್ಯುಕ್ತ ಸಮಾರಂಭಗಳು ಕಡ್ಡಾಯ: ಸುಪ್ರೀಂ ಕೋರ್ಟ್

ವಿಧ್ಯುಕ್ತ ಸಮಾರಂಭ ನಡೆಯದಿದ್ದರೆ ದಂಪತಿಗೆ ವೈವಾಹಿಕ ಸ್ಥಾನಮಾನ ದೊರೆಯುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಆಗಸ್ಟಿನ್ ಜಾರ್ಜ್ ಮಾಸಿಹ್ ಅವರಿದ್ದ ಪೀಠ ಹೇಳಿದೆ.
Marriage
Marriage Image for representative purpose

ಹಿಂದೂ ವಿವಾಹ ಕಾಯಿದೆಯಡಿಯಲ್ಲಿ ಮಾನ್ಯವಾದ ವಿವಾಹಕ್ಕೆ ಕೇವಲ ಪ್ರಮಾಣಪತ್ರವಷ್ಟೇ ಸಾಲದು ಬದಲಿಗೆ ಅಗತ್ಯವಾದ ಸಮಾರಂಭಗಳನ್ನು ಕಡ್ಡಾಯವಾಗಿ ನಡೆಸಿರಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ.

ಸಮಾರಂಭ ನಡೆಯದಿದ್ದರೆ ದಂಪತಿಗೆ ವೈವಾಹಿಕ ಸ್ಥಾನಮಾನ ದೊರೆಯುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್‌ ಅವರಿದ್ದ ಪೀಠ ಹೇಳಿದೆ.

“ಕಾಯಿದೆ ಪ್ರಕಾರ ಮಾನ್ಯತೆ ಪಡೆದ ಮದುವೆಗೆ ಅಗತ್ಯ ಸಮಾರಂಭಗಳನ್ನು ನಡೆಸಿರಬೇಕು. ಸಮಸ್ಯೆ ಅಥವಾ ವಿವಾದ ಉಂಟಾದಾಗ ಆ ಸಮಾರಂಭ ನಡೆದಿರುವ ಬಗ್ಗೆ ಪುರಾವೆಗಳು ಇರಬೇಕು. ಪಕ್ಷಕಾರರು ಅಂತಹ ಆಚರಣೆಯಲ್ಲಿ ಭಾಗಿಯಾಗಿರದಿದ್ದರೆ ಕಾಯಿದೆಯ ಸೆಕ್ಷನ್‌ 7ರ ಪ್ರಕಾರ ಹಿಂದೂ ಮದುವೆ ನಡೆದಿರುವುದಿಲ್ಲ.ಯಾವುದೇ ಸಮಾರಂಭ ನಡೆಸದೆ ಕೇವಲ ಇಲಾಖೆಯೊಂದು ಪ್ರಮಾಣಪತ್ರ ಒದಗಿಸಿದ್ದರೆ ಅದು ಕಕ್ಷಿದಾರರ ವೈವಾಹಿಕ ಸ್ಥಿತಿಯನ್ನು ದೃಢೀಕರಿಸುವುದಿಲ್ಲ ಅಥವಾ ಹಿಂದೂ ಕಾನೂನಿನ ಅಡಿ ವಿವಾಹವನ್ನು ಸಾಬೀತುಗೊಳಿಸುವುದಿಲ್ಲ ಎಂದು ನ್ಯಾಯಾಲಯ ನುಡಿದಿದೆ.

ಹಿಂದೂ ವಿವಾಹದ ವಿಧಿ ವಿಧಾನಗಳಂತೆ ಮದುವೆ ನಡೆಯದಿದ್ದರೆ ಅದನ್ನು ಹಿಂದೂ ವಿವಾಹವೆಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

ಸಂವಿಧಾನದ 142 ನೇ ವಿಧಿಯ (ಯಾವುದೇ ಪ್ರಕರಣದಲ್ಲಿ ಸಂಪೂರ್ಣ ನ್ಯಾಯವನ್ನು ನೀಡಲು ಸುಪ್ರೀಂ ಕೋರ್ಟ್‌ಗೆ ಇರುವ ಅಧಿಕಾರ) ಅಡಿಯಲ್ಲಿ ಅರ್ಜಿಯನ್ನು ಪುರಸ್ಕರಿಸುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಂತಿಮವಾಗಿ ಹಿಂದೂ ವಿವಾಹ ಕಾಯಿದೆಯ ಪ್ರಕಾರ ವಿವಾಹವನ್ನು ಕಾನೂನುಬದ್ಧಗೊಳಿಸದ ಕಾರಣ ವಿವಾಹ ವಿಚ್ಛೇದನ, ಜೀವನಾಂಶ ಹಾಗೂ ಕಕ್ಷಿದಾರರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲಾಯಿತು.

ಪ್ರಕರಣದಲ್ಲಿ ದಂಪತಿ ಹಿಂದೂ ವಿಧಿಗಳ ಪ್ರಕಾರ ಶಾಸ್ತ್ರೋಕ್ತವಾಗಿ ವಿವಾಹವಾಗದೆ ಕಾಯಿದೆಯ ಸೆಕ್ಷನ್ 8ರ ಅಡಿಯಲ್ಲಿ ತಮ್ಮ ವಿವಾಹ ನೋಂದಾಯಿಸಿಕೊಂಡಿದ್ದರು.

ಹಿಂದೂ ವಿವಾಹದ ವಿಧಿ ವಿಧಾನದಂತೆ ಮದುವೆ ನಡೆಯದೆ ಇರುವಾಗ ಕಾಯಿದೆಯ ಸೆಕ್ಷನ್ 8ರ ಅಡಿಯಲ್ಲಿ ವಿವಾಹ ನೋಂದಣಿ ಅಧಿಕಾರಿ ವಿವಾಹವನ್ನು ನೋಂದಾಯಿಸಿಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಕಾಯಿದೆಯ ಸೆಕ್ಷನ್ 8 ರ ಅಡಿಯಲ್ಲಿ ವಿವಾಹದ ನೋಂದಣಿ ಎಂಬುದು ಕಕ್ಷಿದಾರರು ಕಾಯಿದೆಯ ಸೆಕ್ಷನ್ 7ರ ಪ್ರಕಾರ ವೈವಾಹಿಕ ಸಮಾರಂಭದಲ್ಲಿ ಭಾಗಿಯಾಗಿದ್ದರು ಎಂಬುದನ್ನು ದೃಢೀಕರಿಸಲು ಮಾತ್ರವೇ ಇದೆ ಎಂದು ಪೀಠ ಸ್ಪಷ್ಟಪಡಿಸಿದೆ.

ತೀರ್ಪಿನಲ್ಲಿ ಮದುವೆಯ ಪ್ರಾಮುಖ್ಯತೆಯನ್ನು ವಿವರಿಸಿದ ನ್ಯಾಯಾಲಯ ಹಿಂದೂ ವಿವಾಹ ಕಾಯಿದೆಯ ಅಡಿಯಲ್ಲಿ ಅಗತ್ಯವಾದ ವಿಧ್ಯುಕ್ತ ಸಮಾರಂಭಗಳಿಲ್ಲದೆ ಭಾರತೀಯ ವಿವಾಹಗಳನ್ನು ನೋಂದಾಯಿಸುವ ಪ್ರವೃತ್ತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.

ಭಾರತೀಯ ಸಮಾಜದಲ್ಲಿ ಒಂದು ಸಂಸ್ಥೆಯಾಗಿ ಮದುವೆಗೆ ಹೆಚ್ಚಿನ ಮೌಲ್ಯ ಇದ್ದು ದಂಪತಿಗಳ ಪೋಷಕರು ಕಾಗದದ ನೋಂದಣಿಗಳನ್ನು ಪ್ರೋತ್ಸಾಹಿಸಬಾರದು ಎಂದು ಅದು ಹೇಳಿದೆ.

ಪೋಷಕರು ತಮ್ಮ ಮಕ್ಕಳ ಒಕ್ಕೂಟವನ್ನು ತಕ್ಷಣವೇ ಅನುಮೋದಿಸುವುದಕ್ಕೂ ಅದು ಅಸಮಾಧಾನ ವ್ಯಕ್ತಪಡಿಸಿತು. ವಿವಾಹ ಎಂಬ ಸಂಸ್ಥೆಯನ್ನು ಹೇಗೆ ಪ್ರವೇಶಿಸುತ್ತಿದ್ದೇವೆ ಎಂಬ ಬಗ್ಗೆ ಯುವಜನರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಿಂದೂ ವಿವಾಹವನ್ನು ಶಾಸ್ತ್ರೋಕ್ತ ಆಚರಣೆಗಳನ್ನು ಒಳಗೊಂಡ ಕ್ಷುಲ್ಲಕ ಸಂಬಂಧವೆಂದು ಪರಿಗಣಿಸುವ ಬದಲು 'ಶ್ರದ್ಧೆಯಿಂದ, ಕಟ್ಟುನಿಟ್ಟಾಗಿ ಮತ್ತು ಧಾರ್ಮಿಕವಾಗಿ ಪಾಲಿಸಬೇಕು' ಎಂದು ಅದು ಹೇಳಿದೆ.

Related Stories

No stories found.
Kannada Bar & Bench
kannada.barandbench.com