ʼಬಿʼ ಖಾತೆಯ 9,736 ಸ್ವತ್ತುಗಳಿಗೆ ʼಎʼ ಖಾತಾ ಪ್ರಮಾಣ ಪತ್ರ: ಮಾಲೀಕರಿಗೆ ನೋಟಿಸ್‌; ವರದಿ ಸಲ್ಲಿಸಲು ನಿರ್ದೇಶನ

ಅರ್ಜಿದಾರರ ನಿವೇಶನದ ʼಎʼ ಖಾತಾ ಪ್ರಮಾಣ ಪತ್ರ ರದ್ದುಪಡಿಸಿ ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶ ಮಾಡಿದ್ದಾರೆ. ಈ ಆದೇಶ ಮಾಡುವ ಮುನ್ನ ವಿವರಣೆ ನೀಡಲು ಅರ್ಜಿದಾರರಿಗೆ ಅವಕಾಶ ನೀಡಿಲ್ಲ. ಇದು ಏಕ ಪಕ್ಷೀಯ ನಿರ್ಧಾರ, ನ್ಯಾಯಸಮ್ಮತವಲ್ಲ ಎಂದು ವಾದ.
BBMP and Karnataka HC
BBMP and Karnataka HC

ಬಿಬಿಎಂಪಿ ಎಂಟು ವಲಯಗಳ ವ್ಯಾಪ್ತಿಯಲ್ಲಿ ʼಬಿʼ ಖಾತೆಯ 9,736 ಸ್ವತ್ತುಗಳಿಗೆ ಅಕ್ರಮವಾಗಿ ನೀಡಲಾಗಿದ್ದ ʼಎʼ ಖಾತಾ ಪ್ರಮಾಣ ಪತ್ರಗಳನ್ನು ರದ್ದುಪಡಿಸಿರುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ಸ್ವತ್ತುಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆಯೇ ಎಂಬ ಬಗ್ಗೆ ಹತ್ತು ದಿನಗಳಲ್ಲಿ ಮಾಹಿತಿ ಸಲ್ಲಿಸಲುವಂತೆ ಪಾಲಿಕೆಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಸೂಚಿಸಿದೆ.

ಯಲಹಂಕ ವಲಯದ ವರದರಾಜ ಸ್ವಾಮಿ ಬಡಾವಣೆ ನಿವಾಸಿ ಎಸ್ ಎಂ ರಮೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಸಹಾಯಕ ಕಂದಾಯ ಅಧಿಕಾರಿಯ ನೋಟಿಸ್‌ಗೆ ಪತ್ರಕ್ಕೆ ತಡೆ ನೀಡಿರುವ ನ್ಯಾಯಾಲಯವು ಅರ್ಜಿದಾರರ ನಿವೇಶನ ʼಎʼ ಖಾತೆಯಲ್ಲಿಯೇ ಉಳಿಯಲಿದೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ, ರಾಜ್ಯ ಸರ್ಕಾರ, ಬಿಬಿಎಂಪಿ ಮುಖ್ಯ ಆಯುಕ್ತರು, ಸಹಾಯಕ ಕಂದಾಯ ಅಧಿಕಾರಿ ಸೇರಿದಂತೆ ಅರ್ಜಿಯಲ್ಲಿನ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಅಲ್ಲದೇ, ಅರ್ಜಿದಾರರಿಗೆ ಮಾತ್ರ ನೋಟಿಸ್‌ (ನೋಟಿಸ್) ನೀಡಲಾಗಿದೆಯೇ ಅಥವಾ ಅಕ್ರಮವಾಗಿ ಎ ಖಾತೆ ಹೊಂದಲಾಗಿದೆ ಎನ್ನಲಾದ ಎಲ್ಲಾ 9,736 ಸ್ವತ್ತುಗಳ ಮಾಲೀಕರಿಗೂ ನೋಟಿಸ್ ನೀಡಲಾಗಿದೆಯೇ ಎಂಬ ಬಗ್ಗೆ 10 ದಿನದಲ್ಲಿ ಮಾಹಿತಿ ತಿಳಿಸುವಂತೆ ಪಾಲಿಕೆಗೆ ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್‌ 5ಕ್ಕೆ ಮುಂದೂಡಿದೆ.

ಅರ್ಜಿದಾರರು ಪರ ವಕೀಲ ಪವನ್ ಚಂದ್ರ ಶೆಟ್ಟಿ, ಅರ್ಜಿದಾರರ ನಿವೇಶನದ ʼಎʼ ಖಾತಾ ಪ್ರಮಾಣ ಪತ್ರವನ್ನು ರದ್ದುಪಡಿಸಿ ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶ ಮಾಡಿದ್ದಾರೆ. ಈ ಆದೇಶ ಮಾಡುವ ಮುನ್ನ ವಿವರಣೆ ನೀಡಲು ಅರ್ಜಿದಾರರಿಗೆ ಅವಕಾಶ ನೀಡಿಲ್ಲ. ಇದು ಏಕ ಪಕ್ಷೀಯ ನಿರ್ಧಾರವಾಗಿದ್ದು, ನ್ಯಾಯಸಮ್ಮತವಲ್ಲ. ಆದ್ದರಿಂದ, ಮುಖ್ಯ ಆಯುಕ್ತರ ಆದೇಶ ಮತ್ತು ಸಹಾಯಕ ಕಂದಾಯ ಅಧಿಕಾರಿಯ ನೋಟಿಸ್‌ ರದ್ದುಪಡಿಸಬೇಕು ಎಂದು ಕೋರಿದರು.

ಅರ್ಜಿದಾರರು ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ವಲಯದ ವರದರಾಜಸ್ವಾಮಿ ಬಡಾವಣೆಯ ಸರ್ವೇ ನಂ.1ರಲ್ಲಿ 10/ಎ ಸಂಖ್ಯೆಯ (35*55 ಅಡಿ ವಿಸ್ತೀರ್ಣ) ಎ ಖಾತೆಯ ನಿವೇಶನ ಹೊಂದಿದ್ದಾರೆ. ಆದರೆ, ಆ ನಿವೇಶನವು ಬಿ ಖಾತೆಯದ್ದಾಗಿದ್ದರೂ ಅಕ್ರಮವಾಗಿ ಎ ಖಾತಾ ಪ್ರಮಾಣ ಪತ್ರ ನೀಡಲಾಗಿದೆ ಎಂಬುದಾಗಿ ಸಹಾಯಕ ಕಂದಾಯ ಅಧಿಕಾರಿ 2023ರ ಜೂನ್‌ 5ರಂದು ನೀಡಿದ ವರದಿಯಲ್ಲಿ ತಿಳಿದುಬಂದಿದೆ. ಹೀಗಾಗಿ, ಎ ಖಾತಾ ಪ್ರಮಾಣ ಪತ್ರವನ್ನು ರದ್ದುಪಡಿಸಿ, ನಿವೇಶನವನ್ನು ಬಿ ಖಾತೆಗೆ ತಾತ್ಕಾಲಿಕವಾಗಿ ಸೇರಿಸಿ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿ ಬ್ಯಾಟಾಯನಪುರ ವಿಭಾಗದ ಜಂಟಿ ಆಯುಕ್ತರ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ 2023ರ ಜುಲೈ 31ರಂದು ಅರ್ಜಿದಾರರಿಗೆ ನೋಟಿಸ್‌ ನೀಡಿದ್ದರು.

ಜೊತೆಗೆ, ಸ್ವತ್ತಿನ ನೈಜ ದಾಖಲಾತಿಗಳೊಂದಿಗೆ ನೋಟಿಸ್‌ ತಲುಪಿದ 15 ದಿನಗಳ ಒಳಗೆ ಯಲಹಂಕ ವಲಯದ ಜಂಟಿ ಆಯುಕ್ತರಿಗೆ ಸಲ್ಲಿಸಬೇಕು. ಇಲ್ಲವಾದರೆ ತಮ್ಮ ಹೇಳಿಕೆ ಏನೂ ಇಲ್ಲ ಎಂದು ಭಾವಿಸಿ, ಶಾಶ್ವತವಾಗಿ ಸ್ವತ್ತನ್ನು ಬಿ ಖಾತೆಗೆ ಸೇರಿಸಲಾಗುವುದು ಎಂದು ಕಂದಾಯ ಅಧಿಕಾರಿ ತಿಳಿಸಿದ್ದರು. ಆ ತಿಳಿವಳಿಕೆ ಪತ್ರ ರದ್ದತಿಗೆ ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com