ಚೈತ್ರಾ ವಂಚನೆ ಪ್ರಕರಣ: ಜಾಮೀನು ಕೋರಿ ಹೈಕೋರ್ಟ್‌ ಕದತಟ್ಟಿದ ಅಭಿನವ ಹಾಲಶ್ರೀ ಸ್ವಾಮೀಜಿ; ಸರ್ಕಾರಕ್ಕೆ ನೋಟಿಸ್‌

ಸ್ವಾಮೀಜಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ಏಕಸದಸ್ಯ ರಜಾಕಾಲೀನ ಪೀಠವು ಗುರುವಾರ ವಿಚಾರಣೆ ನಡೆಸಿತು.
Halashri Swamiji and Karnataka HC
Halashri Swamiji and Karnataka HC
Published on

ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರಿನ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಪ್ರಕರಣದ ಮೂರನೇ ಆರೋಪಿ ವಿಜಯನಗರ ಜಿಲ್ಲೆ ಹಿರೇಹಡಗಲಿ ಹಾಲಸ್ವಾಮಿ ಮಠದ ಜಿ ಎಂ ಅಭಿನವ ಶ್ರೀ ಹಾಲವೀರಜ್ಜ ಅಲಿಯಾಸ್‌ ಅಭಿನವ ಹಾಲಶ್ರೀ ಸ್ವಾಮೀಜಿ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸ್ವಾಮೀಜಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ಏಕಸದಸ್ಯ ರಜಾಕಾಲೀನ ಪೀಠವು ಗುರುವಾರ ವಿಚಾರಣೆ ನಡೆಸಿತು. ಅರ್ಜಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ. ವಿಚಾರಣೆ ಮುಂದೂಡಿತು.

ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ನನ್ನಿಂದ ₹ 5 ಕೋಟಿ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಉದ್ಯಮಿ ಗೋವಿಂದಬಾಬು ಪೂಜಾರಿ ಪೊಲೀಸರಿಗೆ ದೂರು ನೀಡಿದ್ದರು.

ಈ ಪ್ರಕರಣದಲ್ಲಿ ₹ 1.50 ಕೋಟಿ ಪಡೆದ ಆರೋಪ ಎದುರಿಸುತ್ತಿರುವ ಸ್ವಾಮೀಜಿಯನ್ನು 2023ರ ಸೆಪ್ಟೆಂಬರ್ 19ರಂದು ಸಿಸಿಬಿ ಪೊಲೀಸರು ಒಡಿಶಾದ ಕಟಕ್‌ನಲ್ಲಿ ಬಂಧಿಸಿದ್ದರು. ಇತ್ತೀಚೆಗಷ್ಟೇ ಹಾಲಶ್ರೀ ಸ್ವಾಮೀಜಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿತ್ತು.

Kannada Bar & Bench
kannada.barandbench.com