ಮಾಹಿತಿ ತಂತ್ರಜ್ಞಾನ (ಮಧ್ಯಸ್ಥವೇದಿಕೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ತಿದ್ದುಪಡಿ ನಿಯಮಾವಳಿ- 2023ನ್ನು ಪ್ರಶ್ನಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದ ತೀರ್ಪನ್ನು ಬಾಂಬೆ ಹೈಕೋರ್ಟ್ ಗುರುವಾರ ಕಾಯ್ದಿರಿಸಿದೆ.
ಕಳೆದ ಜನವರಿಯಲ್ಲಿ ಪ್ರಕರಣದ ಕುರಿತು ನೀಡಲಾದ ಭಿನ್ನ ತೀರ್ಪಿನ ನಂತರ ನೇಮಕವಾಗಿದ್ದ ಮೂರನೇ ನ್ಯಾಯಮೂರ್ತಿ (ಟೈ ಬ್ರೇಕರ್ ಜಜ್) ಎ ಎಸ್ ಚಂದೂರ್‌ಕರ್ ಅವರು ತಮ್ಮ ತೀರ್ಪು ಕಾಯ್ದಿರಿಸಿದರು.
ಐಟಿ ತಿದ್ದುಪಡಿ ನಿಯಮಾವಳಿ 2023ರ ಮೂಲಕ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥಿಕೆದಾರರಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿ, 2021ನ್ನು ತಿದ್ದುಪಡಿ ಮಾಡಲಾಗಿದೆ.
ಸುಳ್ಳು ಆನ್‌ಲೈನ್ ಸುದ್ದಿ ಪತ್ತೆಗಾಗಿ ಸತ್ಯ ಪರಿಶೋಧನಾ ಘಟಕ (ಫ್ಯಾಕ್ಟ್ ಚೆಕ್ ಯುನಿಟ್ - ಎಫ್‌ಸಿಯು) ರಚಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವ ನಿಯಮ 3ರ ಸಿಂಧುತ್ವವನ್ನು ಪ್ರಶ್ನಿಸಿ ವಿವಿಧ ಅರ್ಜಿಗಳನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು.
ತಿದ್ದುಪಡಿಗಳು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 79 ಮತ್ತು ಸಂವಿಧಾನದ 14ನೇ ವಿಧಿ (ಸಮಾನತೆಯ ಹಕ್ಕು) ಮತ್ತು 19 (1) (ಎ) (ಜಿ) ವಿಧಿಯನ್ನು (ಯಾವುದೇ ಉದ್ಯೋಗ ಇಲ್ಲವೇ ವ್ಯಾಪಾರದಲ್ಲಿ ತೊಡಗುವ ಸ್ವಾತಂತ್ರ್ಯ ಒದಗಿಸುವ) ಉಲ್ಲಂಘಿಸುತ್ತವೆ ಎಂದು ದೂರಲಾಗಿತ್ತು.
ಜನವರಿ 31ರಂದು ನ್ಯಾಯಮೂರ್ತಿಗಳಾದ ಜಿ ಎಸ್ ಪಟೇಲ್ ಮತ್ತು ನೀಲಾ ಗೋಖಲೆ ಪ್ರಕರಣದಲ್ಲಿ ಭಿನ್ನ ತೀರ್ಪು ನೀಡಿದ್ದರು.
ನ್ಯಾಯಮೂರ್ತಿ ಪಟೇಲ್ ಅವರು ಅರ್ಜಿದಾರರ ಪರವಾಗಿ ತೀರ್ಪು ನೀಡಿ ನಿಯಮ 3 ಅನ್ನು ರದ್ದುಗೊಳಿಸಿದ್ದರು. ಆದರೆ ನ್ಯಾಯಮೂರ್ತಿ ನೀಲಾ ಅವರು ಅರ್ಜಿಗಳನ್ನು ವಜಾಗೊಳಿಸಿ ನಿಯಮದ ಸಿಂಧುತ್ವವನ್ನು ಎತ್ತಿ ಹಿಡಿದಿದ್ದರು.
ಇದಾದ ನಂತರ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣದಲ್ಲಿ ತಮ್ಮ ಅಭಿಪ್ರಾಯ ನೀಡುವುದಕ್ಕಾಗಿ ಚಂದೂರ್‌ಕರ್ ಅವರನ್ನು ಮೂರನೇ ನ್ಯಾಯಮೂರ್ತಿಗಳನ್ನಾಗಿ ನೇಮಿಸಿದ್ದರು.
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಆನ್‌ಲೈನ್ ವಸ್ತುವಿಷಯಕ್ಕಾಗಿ ಸತ್ಯ ಪರಿಶೋಧನಾ ಘಟಕ ಸ್ಥಾಪನೆ ಸಮರ್ಥಿಸಿಕೊಂಡರು. ವಿದೇಶದಲ್ಲಿರುವ ವ್ಯಕ್ತಿಗಳು ದೇಶದೊಳಗೆ ಹಿಂಸಾಚಾರ ಪ್ರಚೋದಿಸುವ ಸಾಧ್ಯತೆಯನ್ನು ಅವರು ಎತ್ತಿ ತೋರಿಸಿದರು.
ಎಫ್‌ಸಿಯುಗಳು ಟೀಕೆ, ವಿಡಂಬನೆ, ಹಾಸ್ಯ ಅಷ್ಟೇ ಏಕೆ ಕೆಲ ಹಂತದವರೆಗೆ ಅಪಮಾನವನ್ನು ಕೂಡ ನಿರ್ಬಂಧಿಸುವ ಉದ್ದೇಶ ಹೊಂದಿಲ್ಲ. ಬದಲಿಗೆ ಆ ಘಟಕಗಳು ಕೇವಲ ಸರ್ಕಾರಿ ವ್ಯವಹಾರಕ್ಕೆ ಮಾತ್ರವೇ ಸೀಮಿತವಾಗಿರಲಿವೆ ಎಂದು ಕೇಂದ್ರ ಎಫ್‌ಸಿಯುಗಳ ಸ್ಥಾಪನೆ ಉದ್ದೇಶವನ್ನು ಬಲವಾಗಿ ಸಮರ್ಥಿಸಿಕೊಂಡಿದೆ.