ಪೌರತ್ವ ಕಾಯಿದೆಯ 6ಎ ಸೆಕ್ಷನ್‌ನ ಸಾಂವಿಧಾನಿಕತೆ ಪ್ರಶ್ನಿಸುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ಅಕ್ಟೋಬರ್ 17ರಂದು ಪ್ರಾರಂಭಿಸುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ, ಎಂ ಎಂ ಸುಂದರೇಶ್, ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿರುವ ಸಾಂವಿಧಾನಿಕ ಪೀಠ 370ನೇ ವಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಸಲಾದ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಪಾಲಿಸಲು ಕಕ್ಷಿದಾರರಿಗೆ ಸೂಚಿಸಿದೆ.
“ಪ್ರಮಾಣಿತ ಕಾರ್ಯಾಚರಣಾ ವಿಧಾನದ ರೂಪದಲ್ಲಿರುವಂತೆಯೇ ದಾಖಲೆಗಳ ಸಂಗ್ರಹವನ್ನು ಸಲ್ಲಿಸುವಂತೆ ನೋಡಲ್ ವಕೀಲರು ಕ್ರಮವಹಿಸಬೇಕು” ಎಂದು ನ್ಯಾಯಾಲಯ ತಿಳಿಸಿದೆ.
ಪ್ರಕರಣದ ದಾಖಲೆಗಳು ಎಷ್ಟು ದೊಡ್ಡ ಪ್ರಮಾಣದಲ್ಲಿವೆ ಎಂದರೆ ಕಂಪ್ಯೂಟರ್‌ಗಳು ಕ್ರ್ಯಾಶ್ ಆಗುತ್ತಿವೆ ಎಂದು ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ವಿಚಾರಣೆ ವೇಳೆ ತಿಳಿಸಿದರು. ನಂತರ ಎಸ್‌ಒಪಿ ಪಾಲಿಸುವಂತೆ ಸಿಜೆಐ ಚಂದ್ರಚೂಡ್ ಆದೇಶಿಸಿದರು.
ಪೌರತ್ವ ಕಾಯಿದೆಯ ಸೆಕ್ಷನ್ 6ಎ , ಜನವರಿ 1, 1966 ಮತ್ತು ಮಾರ್ಚ್ 25, 1971ರ ನಡುವೆ ಭಾರತ ಪ್ರವೇಶಿಸಿ ಅಸ್ಸಾಂನಲ್ಲಿ ವಾಸಿಸುತ್ತಿರುವ ಜನರು ತಮ್ಮನ್ನು ತಾವು ಭಾರತದ ನಾಗರಿಕರು ಎಂದು ನೋಂದಾಯಿಸಿಕೊಳ್ಳಲು ಅನುಮತಿಸುತ್ತದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಪಟ್ಟಿ ಮೇಲೆ ದೊಡ್ಡಮಟ್ಟದ ಪ್ರಭಾವ ಬೀರಲಿದೆ.