ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆಗೆ ಆಕ್ಷೇಪ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

“ಅನುಷ್ಠಾನ ಸಮಿತಿಗೆ ನೇಮಕವಾಗಿರುವವರು (ಕಾಂಗ್ರೆಸ್‌) ಪಕ್ಷವೊಂದರ ಪ್ರತಿನಿಧಿಗಳಾಗಿದ್ದಾರೆ. ಸಂಪುಟ ದರ್ಜೆ ರಾಜ್ಯ ಸಚಿವರಿಗೆ ದೊರೆಯುವ ವೇತನ, ಸೌಲಭ್ಯ ಕಲ್ಪಿಸಲಾಗಿದೆ” ಎಂದು ಮಾಜಿ ಶಾಸಕ ರಾಜೀವ್‌ ಪರ ವಕೀಲರು ವಾದಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆಗೆ ಆಕ್ಷೇಪ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌
Published on

ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿರುವುದನ್ನು ಪ್ರಶ್ನಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಗುರುವಾರ ನೋಟಿಸ್‌ ಜಾರಿ ಮಾಡಿರುವ ಕರ್ನಾಟಕ ಹೈಕೋರ್ಟ್‌ “ಅರ್ಜಿಯಲ್ಲಿ ವಿವರಿಸಲಾದ ವಿಚಾರಗಳು ಅಹಿತಕರ ವಿದ್ಯಮಾನಗಳನ್ನು ಹೇಳುತ್ತವೆ” ಎಂದಿದೆ.

ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಜಿ ಸಚಿವ ಎಚ್‌ ಎಂ ರೇವಣ್ಣ, ಉಪಾಧ್ಯಕ್ಷರನ್ನಾಗಿ ಪುಷ್ಪಾ ಅಮರನಾಥ್‌, ಎಸ್‌ ಆರ್‌ ಪಾಟೀಲ್‌ ಬ್ಯಾಡಗಿ, ಮೆಹ್ರೋಜ್‌ ಖಾನ್‌ ಮತ್ತು ಸೂರಜ್‌ ಹೆಗ್ಡೆ ನೇಮಕಾತಿ ಪ್ರಶ್ನಿಸಿ ಬಿಜೆಪಿ ಮಾಜಿ ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ವಿಭಾಗೀಯ ಪೀಠವು ನಡೆಸಿತು.

“ರಾಜ್ಯ ಸರ್ಕಾರ ಹೊರಡಿಸಿರುವ ಆಕ್ಷೇಪಾರ್ಹವಾದ ಆದೇಶ/ಅಧಿಸೂಚನೆ ಮತ್ತು ಅರ್ಜಿಯಲ್ಲಿನ ವಿವರಣೆ ನೋಡಿದಾಗ ಮೇಲ್ನೋಟಕ್ಕೆ ಅರ್ಜಿದಾರರ ಅಂತಿಮ ವಿಶ್ಲೇಷಣೆಯು ಅವರ ಪ್ರಕರಣದಲ್ಲಿ ಸತ್ಯ ಎನಿಸಿದ್ದು, ಇದು ರಾಜ್ಯ ಸರ್ಕಾರವು ತೆಗೆದುಕೊಳ್ಳುವ ನಿಲುವಿಗೆ ಒಳಪಟ್ಟಿರುತ್ತದೆ. ಅರ್ಜಿಯಲ್ಲಿ ವಿವರಿಸಲಾದ ವಿಚಾರಗಳು ಅಹಿತರ ವಿದ್ಯಮಾನಗಳನ್ನು ಹೇಳುತ್ತವೆ” ಎಂದು ನ್ಯಾಯಾಲಯ ಹೇಳಿದೆ.

ಈ ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ನ್ಯಾಯಾಲಯವು ಆಕ್ಷೇಪಣೆ ಬಯಸುತ್ತಿದ್ದು, ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಪೀಠವು ವಿಚಾರಣೆಯನ್ನು ಮಾರ್ಚ್‌ 27ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು “ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದ್ದು, ಉಪಾಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಲಾಗಿದೆ. ಅನುಷ್ಠಾನ ಸಮಿತಿಗೆ ನೇಮಕವಾಗಿರುವವರು (ಕಾಂಗ್ರೆಸ್‌) ಪಕ್ಷವೊಂದರ ಪ್ರತಿನಿಧಿಗಳಾಗಿದ್ದಾರೆ. ಸಂಪುಟ ದರ್ಜೆ ಮತ್ತು ರಾಜ್ಯ ಸಚಿವರಿಗೆ ದೊರೆಯುವ ವೇತನ, ಸೌಲಭ್ಯ ಕಲ್ಪಿಸಲಾಗಿದೆ. ಈ ನೇಮಕಾತಿ ಮಾತ್ರ ಆಕ್ಷೇಪಾರ್ಹವಲ್ಲ. ನೇಮಕಗೊಂಡಿರುವವರು ಪ್ರಮುಖ ಪಾತ್ರವನ್ನು ನಿಭಾಯಿಸಲಿದ್ದು, ಕಾರ್ಯಾಂಗಕ್ಕೆ ನಿರ್ದೇಶನ ನೀಡುತ್ತಿದ್ದಾರೆ” ಎಂದರು.

ಅಲ್ಲದೇ, “ನೇಮಕಗೊಂಡಿರುವವರ ಶೈಕ್ಷಣಿಕ ಅರ್ಹತೆಯನ್ನು ನೋಡಿದರೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಇಷ್ಟುಮಾತ್ರವಲ್ಲದೇ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲೂ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಲಾಗಿದೆ” ಎಂದು ಆಕ್ಷೇಪಿಸಿದರು.

ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ 200 ಯೂನಿಟ್‌ವರೆಗಿನ ಉಚಿತ ವಿದ್ಯುತ್‌ ಪೂರೈಸುವ ಗೃಹ ಜ್ಯೋತಿ, ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2,000 ಪಾವತಿಸುವ ಗೃಹ ಲಕ್ಷ್ಮಿ, ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ ತಲಾ 10 ಕೆ ಜಿ ಅಕ್ಕಿ ನೀಡುವ ಅನ್ನ ಭಾಗ್ಯ ಮತ್ತು ಪದವೀಧರ ಮತ್ತು ಡಿಪ್ಲೊಮಾ ಪೂರೈಸಿರುವ ನಿರುದ್ಯೋಗ ಯುವಕ/ಯುವತಿಯರಿಗೆ ಎರಡು ವರ್ಷಗಳವರೆಗೆ ಪ್ರತಿ ತಿಂಗಳು ತಲಾ ₹3,000 ಮತ್ತು ₹1,500 ನೀಡುವ ಯುವನಿಧಿ ಹಾಗೂ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ/ಬಿಎಂಟಿಸಿ ಸಾಮಾನ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿರುವ ಶಕ್ತಿ ಯೋಜನೆ ಘೋಷಿಸಿತ್ತು. ಅಧಿಕಾರಕ್ಕೆ ಬಂದ ತಕ್ಷಣ ಅವುಗಳನ್ನು ಜಾರಿಗೆ ನೀಡಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ರಚಿಸಿದೆ.

Kannada Bar & Bench
kannada.barandbench.com