ಅನುದಾನಿತ ಮದ್ರಸಾಗಳ ಸರ್ಕಾರಿ ಶಾಲೆಗಳಾಗಿ ಪರಿವರ್ತಿಸುವ ಕಾಯಿದೆಗೆ ತಕರಾರು: ಅಸ್ಸಾಂನ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಅಸ್ಸಾಂನಲ್ಲಿ ಅಸ್ತಿತ್ವದಲ್ಲಿರುವ ಪ್ರಾಂತೀಯ ಮದ್ರಸಾಗಳನ್ನು ಸಾಮಾನ್ಯ ಸರ್ಕಾರಿ ಶಾಲೆಗಳಾಗಿ ಪರಿವರ್ತಿಸುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಧದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
Supreme Court
Supreme Court
Published on

ಸರ್ಕಾರಿ ಧನಸಹಾಯ ಪಡೆಯುವ ಮದ್ರಸಾಗಳನ್ನು ಸಾಮಾನ್ಯ ಸರ್ಕಾರಿ ಶಾಲೆಗಳಾಗಿ ಪರಿವರ್ತಿಸುವ 2020ರ ಅಸ್ಸಾಂ ರದ್ದತಿ ಕಾಯಿದೆಯನ್ನು ಎತ್ತಿಹಿಡಿದಿದ್ದ ಗುವಾಹಟಿ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಅಸ್ಸಾಂ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಅಸ್ಸಾಂ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಪ್ರಾಂತೀಯ ಮದ್ರಸಾಗಳನ್ನು (ಇಸ್ಲಾಮಿಕ್ ಶಾಲೆಗಳು) ಸಾಮಾನ್ಯ ಸರ್ಕಾರಿ ಶಾಲೆಗಳಾಗಿ ಪರಿವರ್ತಿಸುವ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿತು.

ಅಸ್ಸಾಂ ಮದ್ರಸಾ ಶಿಕ್ಷಣ ಪ್ರಾಂತೀಕರಣ ಕಾಯಿದೆ- 1995 ಮತ್ತು ಅಸ್ಸಾಂ ಮದ್ರಸಾ ಶಿಕ್ಷಣ (ನೌಕರರ ಸೇವೆಗಳ ಪ್ರಾಂತೀಕರಣ ಮತ್ತು ಮದ್ರಸಾ ಶಿಕ್ಷಣ ಸಂಸ್ಥೆಗಳ ಮರುಸಂಘಟನೆ) ಕಾಯಿದೆ- 2018ನ್ನು ಅಸ್ಸಾಂ ರದ್ದತಿ ಕಾಯಿದೆ ರದ್ದುಗೊಳಿಸಿತ್ತು.

Also Read
ಸರ್ಕಾರಿ ಶಾಲೆಯಾಗಿ ಅನುದಾನಿತ ಮದರಸಾಗಳು: ಅಸ್ಸಾಂ ರಿಪೀಲಿಂಗ್ ಕಾಯಿದೆ ಎತ್ತಿಹಿಡಿದ ಗುವಾಹಟಿ ಹೈಕೋರ್ಟ್ [ಚುಟುಕು]

ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಮದ್ರಸಾಗಳು, ಅಲ್ಪಸಂಖ್ಯಾತ ಸಮುದಾಯ ಸ್ಥಾಪಿಸಿ ಆಡಳಿತ ನಡೆಸುತ್ತಿರುವ ಅಲ್ಪಸಂಖ್ಯಾತ ಸಂಸ್ಥೆಗಳು ಎಂಬ ಅರ್ಜಿದಾರರ ವಾದವನ್ನು ಹೈಕೋರ್ಟ್ ಈ ವರ್ಷ ಫೆಬ್ರವರಿ 4ರಂದು ತಿರಸ್ಕರಿಸಿತ್ತು.

ಈ ಶಿಕ್ಷಣ ಸಂಸ್ಥೆಗಳ ಸಂಪೂರ್ಣ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸರ್ಕಾರಿ ನೌಕರರಾಗಿರುವುದರಿಂದ, ಸರ್ಕಾರಿ ಮದ್ರಸಾಗಳನ್ನು ಅಲ್ಪಸಂಖ್ಯಾತ ಸಂಸ್ಥೆಗಳು ಸ್ಥಾಪಿಸಿ ನಡೆಸುತ್ತಿವೆ ಎಂದು ಹೇಳಲಾಗದು ಎಂಬುದಾಗಿ ಹೈಕೋರ್ಟ್‌ ತಿಳಿಸಿತ್ತು.

ತೀರ್ಪನ್ನು ಅಸ್ಸಾಂ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೀಡಿದ್ದು ಅವರೀಗ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದೋನ್ನತಿ ಪಡೆದಿದ್ದಾರೆ.

ವಕೀಲರಾದ ಅದೀಲ್ ಅಹ್ಮದ್  ಅವರ ಮೂಲಕ ಮಹಮ್ಮದ್‌ ಇಮಾದ್ ಉದ್ದೀನ್ ಬರ್ಭುಯಾ ಎಂಬುವವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.ʼಸರ್ಕಾರಿ ಶಾಲೆಗಳಾಗಿರುವ ಮದ್ರಸಾಗಳು ಸಂಪೂರ್ಣವಾಗಿ ಪ್ರಾಂತೀಕರಣದ ಮೂಲಕ ಸರ್ಕಾರದಿಂದ ನಿರ್ವಹಣೆಗೊಳಪಡುತ್ತಿದ್ದು ಸಂವಿಧಾನದ ಪರಿಚ್ಛೇದ 28 (1) ರಿಂದ ಪ್ರಭಾವಿತವಾಗಿವೆ. ಆದ್ದರಿಂದ ಅವುಗಳಲ್ಲಿ ಧಾರ್ಮಿಕ ಬೋಧನೆಗೆ ಅವಕಾಶ ನೀಡಬಾರದು ಎಂದು ಹೈಕೋರ್ಟ್‌ ತಪ್ಪಾಗಿ ಅಭಿಪ್ರಾಯಪಟ್ಟಿದೆ. ಕಾಯಿದೆ ಮೂಲಕ ಅಲ್ಪಸಂಖ್ಯಾತ ಸಂಸ್ಥೆಗಳನ್ನು ಸರ್ಕಾರಿ ಸಂಸ್ಥೆಗಳಾಗಿ ಪರಿವರ್ತಿಸುವುದು ಸಂವಿಧಾನದ 14, 21, 25, 26, 29 ಮತ್ತು 30ರ ಪ್ರಕಾರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆʼ ಎಂದು ಅರ್ಜಿದಾರರು ಹೈಕೋರ್ಟ್‌ನಲ್ಲಿ ವಾದಿಸಿದ್ದರು.  

Kannada Bar & Bench
kannada.barandbench.com