[ಮುಡಾ ಪ್ರಕರಣ] ಲೋಕಾಯುಕ್ತ, ಇ ಡಿಗೆ ನೋಟಿಸ್‌; ಸಿಎಂ ಸಿದ್ದರಾಮಯ್ಯಗೆ ತುರ್ತು ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್‌ ಅವರು “ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್‌ ಪ್ರಶ್ನಿಸಿದ್ದೇವೆ. ಇದೊಂದು ರೀತಿಯಲ್ಲಿ ಸಮಿತಿ ವರದಿಯ ರೀತಿಯಲ್ಲಿದೆ” ಎಂದರು.
CM Siddaramaiah and Karnataka HC
CM Siddaramaiah and Karnataka HC
Published on

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಮೈಸೂರಿನ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಸಲ್ಲಿಸಿದ ʼಬಿʼ ರಿಪೋರ್ಟ್‌ ಅನ್ನು ಅಂಗೀಕರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿರುವ ಅರ್ಜಿ ಸಂಬಂಧ ಲೋಕಾಯುಕ್ತ, ಜಾರಿ ನಿರ್ದೇಶನಾಲಯ ಹಾಗೂ ಸಿದ್ದರಾಮಯ್ಯ ಮತ್ತವರ ಕುಟುಂಬ ಸದಸ್ಯರಿಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿ ಮಾಡಿದೆ.

ಖಾಸಗಿ ದೂರುದಾರರಾಗಿರುವ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್‌ ಅವರು “ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್‌ ಪ್ರಶ್ನಿಸಿದ್ದೇವೆ. ಇದೊಂದು ರೀತಿಯಲ್ಲಿ ಸಮಿತಿ ವರದಿಯ ರೀತಿಯಲ್ಲಿದೆ. ಅರ್ಜಿ ಸಂಬಂಧ ರಿಜಿಸ್ಟ್ರಿಯು ಎತ್ತಿರುವ ಕಚೇರಿ ಆಕ್ಷೇಪಣೆ ಸರಿಪಡಿಸಲಾಗುವುದು” ಎಂದರು.

ಇದನ್ನು ಆಲಿಸಿದ ಪೀಠವು ಮೈಸೂರಿನ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ, ಜಾರಿ ನಿರ್ದೇಶನಾಲಯಕ್ಕೆ ನೋಟಿಸ್‌ ಜಾರಿ ಮಾಡಿತು. ಅಲ್ಲದೇ, ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಅವರ ಭಾವ ಮೈದುನ ಮಲ್ಲಿಕಾರ್ಜುನ ಸ್ವಾಮಿ, ಮುಡಾ ಮಾಜಿ ಆಯುಕ್ತ ಜಿ ಟಿ ದಿನೇಶ್‌ ಕುಮಾರ್‌ ಹಾಗೂ ಪ್ರಕರಣದ ಕೇಂದ್ರವಾಗಿರುವ ಆಕ್ಷೇಪಾರ್ಹವಾದ ಭೂಮಿಯ ಮಾಲೀಕ ಜೆ ದೇವರಾಜು ಅವರಿಗೆ ತುರ್ತು ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ಪೀಠ ಮುಂದೂಡಿತು.

ಮೈಸೂರು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ 2025ರ ಫೆಬ್ರವರಿ 12ರಂದು ಬೆಂಗಳೂರಿನ 82ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯಕ್ಕೆ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಬಿ ರಿಪೋರ್ಟ್‌ ಸಲ್ಲಿಸಿದ್ದರು. ಅದನ್ನು ಅಂಗೀಕರಿಸಿ ವಿಶೇಷ ನ್ಯಾಯಾಲಯ 2026ರ ಜನವರಿ 28ರಂದು ಆದೇಶ ಹೊರಡಿಸಿದೆ. ಹೀಗಾಗಿ, ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಸಲ್ಲಿಸಿರುವ ʼಬಿʼ ರಿಪೋರ್ಟ್‌ ಅನ್ನು ಪಡೆದು ಪರಿಶೀಲಿಸಬೇಕು. ʼಬಿʼ ರಿಪೋರ್ಟ್ ಅಂಗೀಕರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು. ಅಲ್ಲದೇ, ಸ್ವತಂತ್ರ ತನಿಖಾ ಸಂಸ್ಥೆಗೆ ಪ್ರಕರಣದ ತನಿಖೆ ವರ್ಗಾಯಿಸಬೇಕು. ತನಿಖೆ ನಡೆಸಿ ಹೊಸದಾಗಿ ವರದಿ ಸಲ್ಲಿಸಲು ಸ್ವತಂತ್ರ ತನಿಖಾ ಸಂಸ್ಥೆಗೆ ನಿರ್ದೇಶಿಸಬೇಕು ಎಂದು ಸ್ನೇಹಮಯ ಕೃಷ್ಣ ಕೋರಿದ್ದಾರೆ.

ಪ್ರಕರಣದ ಹಿನ್ನೆಲೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಅವರಿಗೆ ಸೇರಿದ ಮೈಸೂರಿನ ಕೆಸರೆ ಗ್ರಾಮದ ಸರ್ವೇ ನಂಬರ್ 464ರ 3 ಎಕರೆ 16 ಗುಂಟೆ ಜಮೀನಿನ ಸ್ವಾಧೀನಪಡಿಸಿಕೊಂಡು, ಅದರ ಬದಲಿಗೆ ಸುಮಾರು 56 ಕೋಟಿ ಮೌಲ್ಯದ 14 ನಿವೇಶನಗಳನ್ನು ಮುಡಾ ಅಕ್ರಮವಾಗಿ ಹಂಚಿಕೆ ಮಾಡಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ. ಹೀಗಾಗಿ, ಪ್ರಕರಣದ ಕುರಿತು ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಕೋರಿ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ 2024ರ ಜುಲೈ 3ರಂದು ಸ್ನೇಹಮಯಿ ಕೃಷ್ಣ ದೂರು ದಾಖಲಿಸಿದ್ದರು. ನಂತರ ಪ್ರಕರಣದ ತನಿಖೆ/ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿ ಸ್ನೇಹಮಯಿ ಕೃಷ್ಣ, 2024ರ ಜೂನ್-ಜುಲೈನಲ್ಲಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು.

Also Read
ಮುಡಾ ಪ್ರಕರಣ: ʼಬಿʼ ರಿಪೋರ್ಟ್‌ ಅಂಗೀಕಾರ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಕದತಟ್ಟಿದ ಸ್ನೇಹಮಯಿ ಕೃಷ್ಣ

ಈ ಬಗ್ಗೆ ಪರಿಶೀಲನೆ ನಡೆಸಿ, ಪ್ರಕರಣದ ತನಿಖೆ/ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲರು ಆಗಸ್ಟ್‌ 17ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್‌ 19ರಂದು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್, ಪೊಲೀಸ್‌ ತನಿಖೆಗೆ ಅನುಮತಿಸಿ 2024ರ ಸೆಪ್ಟೆಂಬರ್‌ 24ರಂದು ಆದೇಶಿಸಿತ್ತು. ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಕುಟುಂಬದ ಸದಸ್ಯರ ವಿರುದ್ಧ ಬಿ ರಿಪೋರ್ಟ್‌ ಸಲ್ಲಿಸಿದ್ದರು. ಅದನ್ನು ವಿಶೇಷ ನ್ಯಾಯಾಲಯ ಅಂಗೀಕರಿಸಿತ್ತು.

Kannada Bar & Bench
kannada.barandbench.com