
ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಪ್ರಶ್ನಿಸಲಾದ ಅರ್ಜಿಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮಧ್ಯಂತರ ರಕ್ಷಣೆ ನೀಡಲು ಸೋಮವಾರ ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್, ಈ ಸಂಬಂಧ ಏನಿದ್ದರೂ ಪ್ರತ್ಯೇಕ ಮಧ್ಯಂತರ ಅರ್ಜಿ ಸಲ್ಲಿಸಬಹುದು ಎಂದು ಅರ್ಜಿದಾರರಿಗೆ ಸೂಚಿಸಿದೆ.
ಬೀದರ್‌ನ ಶಿವಾರಾಜ ಕಣಶೆಟ್ಟಿ ಮತ್ತು ಇತರರು, ಕೆ ಸಿ ಶಿವರಾಂ ಮತ್ತು ಇತರರು, ಬೆಂಗಳೂರಿನ ಬುಜೇಂದ್ರ ಮತ್ತು ಇತರರು, ನಟ ಮುಖ್ಯಮಂತ್ರಿ ಚಂದ್ರು ಮತ್ತು ಇತರರು ಹಾಗೂ ಬೆಂಗಳೂರಿನ ಸಮಾಜ ಸಂಪರ್ಕ ವೇದಿಕೆ ಅಧ್ಯಕ್ಷ ಜಿ ಎನ್ ಶ್ರೀಕಂಠಯ್ಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರ ಶಿವರಾಜ ಕಣಶೆಟ್ಟಿ ಪರ ಹಿರಿಯ ವಕೀಲ ಗಂಗಾಧರ ಆರ್. ಗುರುಮಠ ವಾದ ಮಂಡಿಸಲು ಮುಂದಾಗುತ್ತಿದ್ದಂತೆಯೇ, ಮುಖ್ಯ ನ್ಯಾಯಮೂರ್ತಿಯವರು, “ಇದರಲ್ಲಿ ತುರ್ತು ಏನಿದೆ, ಅವಸರ ಮಾಡಬೇಡಿ” ಎಂದರು. ಇದಕ್ಕೆ ಪೂರಕವಾಗಿ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, “ತುರ್ತು ಏನಿಲ್ಲ” ಎಂದರು.
ಇದಕ್ಕೆ ಪ್ರತಿಯಾಗಿ ಗುರುಮಠ ಅವರು “ಕಳೆದ ವಿಚಾರಣೆ ವೇಳೆ ಪೀಠ ನಮ್ಮ ಆಕ್ಷೇಪವನ್ನು ವಿವರವಾಗಿ ಆಲಿಸಿದೆ. ಈ ಪ್ರಕರಣದಲ್ಲಿ ಅರ್ಜಿದಾರರಿಗೆ ಮಧ್ಯಂತರ ರಕ್ಷಣೆ ನೀಡಬೇಕು. ಅಂತೆಯೇ, ರಾಜ್ಯ ಸರ್ಕಾರ 2002ರ ಮಾರ್ಚ್ 30ರಂದು ರೂಪಿಸಿದ ಮೀಸಲಾತಿಯನ್ನು ಮುಂದುವರಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ವಾಗ್ದಾನ ನೀಡಿದೆ...’ ಎಂದು ವಿವರಿಸಲು ಮುಂದಾದರು. ಆದರೆ, ಪೀಠ ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿತು.
ಎಚ್ ಕಾಂತರಾಜು ಅವರು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆಸಲಾಗಿರುವ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಆಕ್ಷೇಪಿಸಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿದೆ.