ಬೆಂಗಳೂರಿನ ಎಚ್‌ಆರ್‌ಬಿ ಲೇಔಟ್ ನಿರ್ಮಾಣಕ್ಕೆ ಮೀಸಲಿರಿಸಿದ್ದ ಜಾಗವೊಂದರ ಭೂ ಸ್ವಾಧೀನ ಅಧಿಸೂಚನೆ ರದ್ದುಪಡಿಸಿ ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠ ದಶಕದ ಹಿಂದೆ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಈಗ ಮೇಲ್ಮನವಿ ಸಲ್ಲಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಡೆಗೆ ಹೈಕೋರ್ಟ್‌ನ ವಿಭಾಗೀಯ ಪೀಠವು ಶುಕ್ರವಾರ ಕಿಡಿಕಾರಿದೆ.
ಎಚ್‌ಆರ್‌ಬಿ ಲೇಔಟ್ 3ನೇ ಹಂತದ ಬಡಾವಣೆ ನಿರ್ಮಾಣ ಹಿನ್ನೆಲೆಯಲ್ಲಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದ್ದ ನಗರದ ಚೋಳನಾಯಕನಹಳ್ಳಿ ಗ್ರಾಮದ ಸರ್ವೆ ನಂ.47ರಲ್ಲಿನ 17.5 ಗುಂಟೆ ಜಾಗಕ್ಕೆ ಸಂಬಂಧಿಸಿದ ಭೂ ಸ್ವಾಧೀನ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಿ 2012ರ ಫೆಬ್ರವರಿ 22ರಂದು ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ 2022ರ ಫೆಬ್ರವರಿ 25ರಂದು ಬಿಡಿಎ ಆಯುಕ್ತರು ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
10 ವರ್ಷ ತಡವಾಗಿ ಮೇಲ್ಮನವಿ ಸಲ್ಲಿಸಿದ ಬಿಡಿಎ ಆಯಕ್ತರ ಕ್ರಮವನ್ನು ತರಾಟೆಗೆ ತೆಗೆದುಕೊಂಡ ಪೀಠವು ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿತು. ಈ ಮೇಲ್ಮನವಿಯನ್ನು ಸಲ್ಲಿಸಲು 2,540 ದಿನಗಳ ಕಾಲ ವಿಳಂಬ ಮಾಡಲಾಗಿದೆ. 2012ರಲ್ಲಿ ಹೈಕೋರ್ಟ್ ಏಕ ಸದಸ್ಯ ಪೀಠವು ಆದೇಶಿಸಿದೆ. 2013ರಲ್ಲಿ ಕಾನೂನು ಅಧಿಕಾರಿ ಅಭಿಪ್ರಾಯ ನೀಡಿದ್ದಾರೆ. ಆದರೆ, ಅಂದಿನಿಂದಲೂ ಕಡತವು ಬಿಡಿಎ ಆಯುಕ್ತರ ಬಳಿಯಿದೆ. ಪ್ರಕರಣದ ಸಂಬಂಧ ಸರ್ಕಾರ ಪ್ರಶ್ನಿಸಿದ ಮೇಲೆ ಎಚ್ಚೆತ್ತ ಬಿಡಿಎ ಆಯ್ತುಕ್ತರು ಮೇಲ್ಮನವಿ ಸಲ್ಲಿಸಿದ್ದಾರೆ. ಇಷ್ಟು ವಿಳಂಬ ಮಾಡುವುದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ನ್ಯಾಯಾಲಯಕ್ಕೆ ಅನಿಸುತ್ತಿಲ್ಲ. ಇನ್ನೂ ಮೇಲ್ಮನವಿ ಸಲ್ಲಿಸಲು ಇಷ್ಟು ವಿಳಂಬ ಮಾಡಿರುವುದಕ್ಕೆ ಬಿಡಿಎ ಸೂಕ್ತ ಕಾರಣ ನೀಡಿಲ್ಲ ಎಂದು ತಿಳಿಸಿದ ವಿಭಾಗೀಯ ಪೀಠವು ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ: ಎಚ್‌ಆರ್‌ಬಿ ಲೇಔಟ್ 3ನೇ ಹಂತದ ಬಡಾವಣೆ ನಿರ್ಮಾಣ ಹಿನ್ನೆಲೆಯಲ್ಲಿ ಚೋಳನಾಯಕನಹಳ್ಳಿ ಗ್ರಾಮದಲ್ಲಿ ಸಾಕಷ್ಟು ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಬಿಡಿಎ 1978ರ ಜೂನ್ 2ರಂದು ಪ್ರಾಥಮಿಕ ಮತ್ತು 1989ರ ಫೆಬ್ರವರಿ 2ರಂದು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಅದರಲ್ಲಿ ಸರ್ವೇ ನಂ 47ರಲ್ಲಿನ 17.5 ಗುಂಟೆ ಜಾಗವು ರಾಮಯ್ಯ ಎಂಬುವರಿಗೆ ಸೇರಿತ್ತು. ಆ ಜಾಗವನ್ನು ಬಿಡಿಎ ಸ್ವಾಧೀನಪಡಿಸಿಕೊಳ್ಳಲೂ ಇಲ್ಲ ಹಾಗೂ ಪರಿಹಾರವೂ ನೀಡಲಿಲ್ಲ. ಈ ಮಧ್ಯೆ ರಾಮಯ್ಯ ಅವರ ಜಮೀನು ಸುತ್ತಲಿನ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಟ್ಟು ಬಿಡಿಎ ಆದೇಶಿಸಿತ್ತು. ಆ ಭೂಮಿಯನ್ನು ಸಂಬಂಧಪಟ್ಟ ಮಾಲೀಕರು ಅಭಿವೃದ್ಧಿಪಡಿಸಿದ್ದರು.
ಇದರಿಂದ ತಮಗೆ ಸೇರಿದ ಸಣ್ಣ ಜಾಗದಲ್ಲಿ ಬಡಾವಣೆ ರಚಿಸಲಾಗದ ಕಾರಣಕ್ಕೆ ಭೂ ಸ್ವಾಧೀನದಿಂದ ಕೈ ಬಿಡಬೇಕು. ಹಾಗೆಯೇ, ಕೃಷಿಯೇತರ ಚಟುವಟಿಕೆಗೆ ಬಳಸಲು ಅನುಮತಿ ನೀಡಲು ಕೋರಿ ರಾಮಯ್ಯ ಬಿಡಿಎಗೆ ಅರ್ಜಿ ಸಲ್ಲಿಸಿದ್ದರು. ಅದನ್ನು 2012ರಲ್ಲಿ ತಿರಸ್ಕರಿಸಿದ ಕಾರಣ ರಾಮಯ್ಯ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ರಾಮಯ್ಯ ಅವರ ಭೂಮಿಗೆ ಸಂಬಂಧಿಸಿದಂತೆ ಬಿಡಿಎ ಹೊರಡಿಸಿದ ಅಂತಿಮ ಭೂ ಸ್ವಾಧೀನ ಅಧಿಸೂಚನೆ ಮತ್ತು ಭೂ ಪರಿವರ್ತನೆಗೆ ನಿರಾಕರಿಸಿ ಬಿಡಿಎ ನೀಡಿದ್ದ ಹಿಂಬರಹವನ್ನು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ರದ್ದುಪಡಿಸಿತು. ಜತೆಗೆ, ಭೂ ಪರಿವರ್ತನೆಗೆ ಕೋರಿ ರಾಮಯ್ಯ ಅರ್ಜಿ ಸಲ್ಲಿಸಿದರೆ, ಅದನ್ನು ಜಿಲ್ಲಾಧಿಕಾರಿ ಪರಿಗಣಿಸಿ ಕಾನೂನು ಪ್ರಕಾರ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿ 2012ರ ಫೆಬ್ರವರಿ 22ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಬಿಡಿಎ ಆಯುಕ್ತರು 2022ರ ಫೆಬ್ರವರಿ 25ರಂದು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.