ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲವಿದ್ಯುತ್‌ ಯೋಜನೆಯ ಕಾನೂನು ಬದ್ಧತೆ ಪ್ರಶ್ನೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಉದ್ದೇಶಿತ ಯೋಜನೆ ವನ್ಯಜೀವಿಗಳಿಗೆ ಹಾನಿ ಮಾಡಲಿದ್ದು, ಒಟ್ಟು 142.763 ಹೆಕ್ಟೇರ್ ಭೂಮಿ ಅಗತ್ಯವಿದೆ. ಈ ಪೈಕಿ 102 ಹೆಕ್ಟೇರ್ ಪ್ರದೇಶ ಭೌಗೋಳಿಕವಾಗಿ ಅಭಯಾರಣ್ಯದೊಳಗೆ & 39.715 ಹೆಕ್ಟೇರ್ ಪರಿಸರ ಸೂಕ್ಷ್ಮ ವಲಯದಲ್ಲಿದೆ ಎಂದು ಆಕ್ಷೇಪಿಸಲಾಗಿದೆ.
Karnataka High Court
Karnataka High Court
Published on

ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಲಿರುವ ಉದ್ದೇಶಿತ ₹10 ಸಾವಿರ ಕೋಟಿ ವೆಚ್ಚದ ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಗೆ ರಾಜ್ಯ ವನ್ಯಜೀವಿ ಮಂಡಳಿ ನೀಡಿರುವ ಅನುಮೋದನೆ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ನೀಡಿರುವ ತಾತ್ವಿಕ ಅನುಮೋದನೆಯ ಕಾನೂನು ಬದ್ಧತೆ ಪ್ರಶ್ನಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಸಾಗರದ ಅಖಿಲೇಶ್ ಚಿಪ್ಲಿ, ಉಡುಪಿಯ ಡಾ.ರವೀಂದ್ರನಾಥ ಶಾನಬಾಗ್‌ ಮತ್ತು ಶಿವಮೊಗ್ಗದ ಸಿ ಬಿ ಮನೋಹರ ಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲೆ ಬಿ ವಿ ವಿದ್ಯುಲ್ಲತಾ ಅವರ ವಾದ ಆಲಿಸಿದ ಪೀಠವು, ಪ್ರತಿವಾದಿಗಳಾದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿ ಹಾಗೂ ರಾಜ್ಯ ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದೆ.

ಉದ್ದೇಶಿತ ಯೋಜನೆಯು ವನ್ಯಜೀವಿಗಳಿಗೆ ಸಂಪೂರ್ಣ ಹಾನಿ ಉಂಟು ಮಾಡಲಿದೆ. ಈ ಯೋಜನೆಗೆ ಒಟ್ಟು 142.763 ಹೆಕ್ಟೇರ್ ಭೂಮಿಯ ಅಗತ್ಯವಿದೆ. ಅದರಲ್ಲಿ 102 ಹೆಕ್ಟೇರ್ ಪ್ರದೇಶವು ಭೌಗೋಳಿಕವಾಗಿ ಅಭಯಾರಣ್ಯದೊಳಗೆ ಮತ್ತು 39.715 ಹೆಕ್ಟೇರ್ ಪರಿಸರ ಸೂಕ್ಷ್ಮ ವಲಯದಲ್ಲಿದೆ. ಇಂತಹ ಬೃಹತ್‌ ಅಭಯಾರಣ್ಯ ಮತ್ತು ಪರಿಸರ ಸೂಕ್ಷ್ಮ ವಲಯದೊಳಗೆ ಜಲವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮೋದನೆ ನೀಡುವುದರಿಂದ ಬೃಹತ್ ಕಂಬ ನೆಡುವುದು, ಕಂಬಗಳ ನಡುವೆ ಹೆಚ್ಚಿನ ವೋಲ್ಟೇಜ್ ತಂತಿ ಎಳೆಯುವುದೂ ಸೇರಿದಂತೆ ಉತ್ಪಾದಿಸುವ ಜಲವಿದ್ಯುತ್ ರವಾನಿಸಲು ಪ್ರಸರಣ ಮಾರ್ಗಗಳ ನಿರ್ಮಾಣದಿಂದ ಅಮೂಲ್ಯ ವೃಕ್ಷ ಸಂಪತ್ತು ನಾಶವಾಗಲಿದೆ. ವನ್ಯಜೀವಿಗಳ ಆವಾಸಸ್ಥಾನಕ್ಕೆ ಧಕ್ಕೆಯಾಗಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Also Read
ಶರಾವತಿ ಹೈಡ್ರೋ ಎಲೆಕ್ಟ್ರಿಕ್‌ ಯೋಜನೆ ಟೆಂಡರ್‌ ಪ್ರಕ್ರಿಯೆ ಊರ್ಜಿತಗೊಳಿಸಿದ ಹೈಕೋರ್ಟ್‌

ವನ್ಯಜೀವಿಗಳ ಪ್ರಯೋಜನಕ್ಕಾಗಿ ಮತ್ತು ಬೇಡದ ಉದ್ದೇಶಗಳಿಗಾಗಿ ವನ್ಯಜೀವಿ ಅಭಯಾರಣ್ಯ ಪ್ರದೇಶ ಬಳಕೆಗೆ ಅನುಮೋದನೆ ನೀಡುವ ಅಧಿಕಾರ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಗೆ ಇಲ್ಲ. ಈ ನಿಟ್ಟಿನಲ್ಲಿ, ವನ್ಯಜೀವಿ ರಕ್ಷಣಾ ಕಾಯಿದೆ–1972ರ ಸೆಕ್ಷನ್‌ 29ರ ಅಡಿಯಲ್ಲಿ ವಿಧಿಸಲಾದ ನಿರ್ಬಂಧವನ್ನು ಗಮನದಲ್ಲಿ ಇರಿಸಿಕೊಂಡು ಶರಾವತಿ ಕಣಿವೆಯ ಅಭಯಾರಣ್ಯ ಮತ್ತು ಅದರ ಪರಿಸರ ಸೂಕ್ಷ್ಮ ವಲಯದಲ್ಲಿ ಕೈಗೆತ್ತಿಕೊಳ್ಳಲಿರುವ ಉದ್ದೇಶಿತ ಯೋಜನೆಗೆ ಯಾವುದೇ ಅನುಮೋದನೆ ನೀಡಬಾರದು ಎಂದು ಕೋರಲಾಗಿದೆ.

ಶರಾವತಿ ಹೈಡ್ರೋ ಎಲೆಕ್ಟ್ರಿಕಲ್ ಯೋಜನೆಗೆ ಸಂಬಂಧಿಸಿರುವ ಟೆಂಡರ್‌ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್‌ 2024ರ ಏಪ್ರಿಲ್‌ 26ರಂದು ಊರ್ಜಿತಗೊಳಿಸಿತ್ತು.

Kannada Bar & Bench
kannada.barandbench.com