[ವಾಲ್ಮೀಕಿ ನಿಗಮ ಹಗರಣ] ನ್ಯಾಯಾಲಯ ಪರಿಗಣನೆ ಆದೇಶ ರದ್ದತಿಗೆ ಕೋರಿಕೆ: ಇ ಡಿ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್‌

ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ ಡಿಯು ದಾಖಲಿಸಿರುವ ದೂರು ಮತ್ತು ಆ ಸಂಬಂಧ ಸಲ್ಲಿಕೆ ಮಾಡಿರುವ ಆರೋಪ ಪಟ್ಟಿ ಆಧರಿಸಿ ಪ್ರಕರಣದ ಸಂಜ್ಞೇ ಪರಿಗಣಿಸಿರುವ ಆದೇಶ ಬದಿಗೆ ಸರಿಸಲು ಕೋರಿರುವ ನಿಗಮದ ಮಾಜಿ ಎಂಡಿ ಪದ್ಮನಾಭ.
ED & Karnataka HC
ED & Karnataka HC
Published on

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್‌) ಹಣ ದುರ್ಬಳಕೆ ಪ್ರಕರಣದಲ್ಲಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ ಜಿ ಪದ್ಮನಾಭ ಅವರ ವಿರುದ್ಧ ವಿಚಾರಣಾಧೀನ ನ್ಯಾಯಾಲಯವು ಸಂಜ್ಞೇ ಪರಿಗಣಿಸಿರುವುದರ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿ ಮಾಡಿದೆ.

ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ದಾಖಲಿಸಿರುವ ದೂರು ಮತ್ತು ಆ ಸಂಬಂಧ ಸಲ್ಲಿಕೆ ಮಾಡಿರುವ ಆರೋಪ ಪಟ್ಟಿ ಆಧರಿಸಿ ಪ್ರಕರಣದ ಸಂಜ್ಞೇ ಪರಿಗಣಿಸಿರುವ ಆದೇಶ ಬದಿಗೆ ಸರಿಸಲು ಕೋರಿ ನಿಗಮದ ಮಾಜಿ ವ್ಯವಸ್ಥಾಪಕ ಜೆ ಜಿ ಪದ್ಮನಾಭ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ನಡೆಸಿತು.

ಜಾರಿ ನಿರ್ದೇಶನಾಲಯದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ಗೆ ನೋಟಿಸ್‌ ಜಾರಿ ಮಾಡಲಾಗಿದೆ. ಅರ್ಜಿದಾರರು ಪ್ರಸನ್ನಕುಮಾರ್‌ ಅವರಿಗೆ ಅರ್ಜಿಯ ಪ್ರತಿ ಒದಗಿಸಬೇಕು ಎಂದು ಆದೇಶಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಫೆಬ್ರವರಿ 13ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲೆ “ಪದ್ಮನಾಭ ಅವರು ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಬೆಂಗಳೂರಿನ ವಸಂತ ನಗರದಲ್ಲಿದ್ದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಖಾತೆಯನ್ನು ಎಂ ಜಿ ರಸ್ತೆಯಲ್ಲಿರುವ ಶಾಖೆಗೆ ವರ್ಗಾವಣೆ ಮಾಡಿದ ಆರೋಪ ಮಾತ್ರ ಪದ್ಮನಾಭ ವಿರುದ್ಧ ಇದೆ. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಇಲ್ಲದಿದ್ದರೂ ಅಕ್ರಮ ಹಣ ವರ್ಗಾವಣೆ (ಪಿಎಂಎಲ್‌) ಕಾಯಿದೆ ಸೆಕ್ಷನ್‌ಗಳಾದ 3, 4 ಮತ್ತು 70ರ ಅಡಿಯ ಅಪರಾಧಕ್ಕಾಗಿ ಅವರ ವಿರುದ್ಧ ಸಂಜ್ಞೇ ಪರಿಗಣಿಸಲಾಗಿದೆ” ಎಂದರು.

Also Read
ವಾಲ್ಮೀಕಿ ನಿಗಮದ ಹಗರಣ: ಮಾಜಿ ಎಂಡಿ ಪದ್ಮನಾಭ, ಸ್ಟಾಕ್‌ ಬ್ರೋಕರ್‌ ಶ್ರೀನಿವಾಸ್‌ ರಾವ್‌ಗೆ ಜಾಮೀನು ನಿರಾಕರಣೆ

ಈ ಹಂತದಲ್ಲಿ ಪೀಠವು “ಇದು ಎಷ್ಟು ಕೋಟಿಯ ಹಗರಣ” ಎಂದಿತು. ಅದಕ್ಕೆ ಅರ್ಜಿದಾರರ ವಕೀಲೆಯು “ಒಟ್ಟಾರೆ 87 ಕೋಟಿ ಹಗರಣ ಇದಾಗಿದೆ. ನನ್ನ ಸಹಿಯನ್ನು ನಕಲು ಮಾಡಿ ಅಲ್ಲಿಂದ ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ” ಎಂದರು.

ಆರೋಪದ ಸಂಬಂಧ ಜಾರಿ ನಿರ್ದೇಶನಾಲಯವು ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿದ್ದು, ಆರೋಪ ಪಟ್ಟಿ ಸಲ್ಲಿಸಿದೆ. ಇತ್ತ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಿ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಜೆ ಬಿ ಪದ್ಮನಾಭ ಅವರು ಇಂದಿಗೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

Kannada Bar & Bench
kannada.barandbench.com