ಐಸಿಐಸಿಐ-ವಿಡಿಯೋಕಾನ್ ಸಾಲ ಪ್ರಕರಣ: ಕೋಚರ್‌ ದಂಪತಿಯನ್ನು ಸಿಬಿಐ ಬಂಧಿಸಿದ್ದು ಕಾನೂನುಬಾಹಿರ ಎಂದ ಬಾಂಬೆ ಹೈಕೋರ್ಟ್

ದಂಪತಿಗೆ ಜನವರಿ 9, 2023ರಂದು ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ನ್ಯಾಯಮೂರ್ತಿಗಳಾದ ಅನುಜಾ ಪ್ರಭುದೇಸಾಯಿ ಮತ್ತು ಎನ್ ಆರ್ ಬೋರ್ಕರ್ ಅವರಿದ್ದ ವಿಭಾಗೀಯ ಪೀಠ ಇಂದು ಎತ್ತಿಹಿಡಿಯಿತು.
ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್

ವಿಡಿಯೋಕಾನ್ ಸಾಲ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (ಸಿಇಒ) ಚಂದಾ ಕೋಚರ್‌ ಹಾಗೂ ಅವರ ಪತಿ ದೀಪಕ್ ಕೋಚರ್‌ ಅವರನ್ನು ಸಿಬಿಐ ಬಂಧಿಸಿರುವುದು ಕಾನೂನುಬಾಹಿರ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.

ದಂಪತಿಗೆ ಜನವರಿ 9, 2023ರಂದು ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ನ್ಯಾಯಮೂರ್ತಿಗಳಾದ ಅನುಜಾ ಪ್ರಭುದೇಸಾಯಿ ಮತ್ತು ಎನ್ ಆರ್ ಬೋರ್ಕರ್ ಅವರಿದ್ದ ವಿಭಾಗೀಯ ಪೀಠ ಇಂದು ಎತ್ತಿಹಿಡಿಯಿತು.

ನ್ಯಾಯಮೂರ್ತಿಗಳಾದ ಅನುಜಾ ಪ್ರಭುದೇಸಾಯಿ ಮತ್ತು  ಎನ್ ಆರ್ ಬೋರ್ಕರ್
ನ್ಯಾಯಮೂರ್ತಿಗಳಾದ ಅನುಜಾ ಪ್ರಭುದೇಸಾಯಿ ಮತ್ತು ಎನ್ ಆರ್ ಬೋರ್ಕರ್

ವಿಡಿಯೋಕಾನ್ ಸಮೂಹ ಸಂಸ್ಥೆಗೆ 2012ರಲ್ಲಿ 3,250 ಕೋಟಿ ರೂಪಾಯಿ ಸಾಲ ನೀಡುವಾಗ ವಂಚನೆ ಮತ್ತು ಅಕ್ರಮ ಎಸಗಲಾಗಿದೆ ಎಂಬ ಆರೋಪದ ಮೇಲೆ ಚಂದಾ ಕೋಚರ್‌ ಮತ್ತು ದೀಪಕ್ ಕೋಚರ್‌ ಅವರನ್ನು ಸಿಬಿಐ ಡಿಸೆಂಬರ್ 24 ರಂದು ಬಂಧಿಸಿತ್ತು.

ಚಂದಾ ಅವರ ಪತಿ ಮತ್ತು ಅವರ ಕುಟುಂಬ ಸದಸ್ಯರು ಈ ವ್ಯವಹಾರಗಳಿಂದ ಲಾಭ ಪಡೆದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.

ಕೋಚರ್‌ ಅವರು ಐಸಿಐಸಿಐ ಬ್ಯಾಂಕಿನ ವ್ಯವಹಾರಗಳ ಮುಖ್ಯಸ್ಥರಾಗಿದ್ದಾಗ, ಅವರು ವಿಡಿಯೋಕಾನ್ ಸಮೂಹ ಕಂಪೆನಿಗಳಿಗೆ ಸಾಲ ನೀಡಿದ್ದರು. ಇದಕ್ಕೆ ಪ್ರತಿಯಾಗಿ, ಅವರ ಪತಿಯ ಕಂಪೆನಿ ರಿನ್ಯೂವೇಬಲ್‌ಗೆ ವಿಡಿಯೋಕಾನ್‌ ಹೂಡಿಕೆ ಮಾಡಿತ್ತು ಎಂದು ಆರೋಪಿಸಲಾಗಿದೆ. ಸಾಲವು ನಂತರ ಅನುತ್ಪಾದಕ ಆಸ್ತಿಯಾಗಿ (ಎನ್‌ಪಿಎ) ಮಾರ್ಪಟ್ಟಿತ್ತು. ಇದನ್ನು ಬ್ಯಾಂಕ್ ವಂಚನೆ ಎಂದು ಕರೆಯಲಾಗಿತ್ತು.

ಸಿಬಿಐ ವಶದಲ್ಲಿದ್ದ ಅವರನ್ನು 2022ರ ಡಿಸೆಂಬರ್ 29 ರಂದು ಸಿಬಿಐ ವಿಶೇಷ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿತ್ತು.

ತಮ್ಮ ಬಂಧನ ಕಾನೂನುಬಾಹಿರವಾಗಿದ್ದು, ಬಂಧನದಿಂದ ಬಿಡುಗಡೆ ಮಾಡುವಂತೆ ಕೋರಿ ಇಬ್ಬರೂ ಹೈಕೋರ್ಟ್ ಮೆಟ್ಟಿಲೇರಿದ್ದರು.

ಕಳೆದ ವರ್ಷ ಜನವರಿ 9 ರಂದು ನ್ಯಾಯಾಂಗ ಬಂಧನದಿಂದ ಮಧ್ಯಂತರ ಬಿಡುಗಡೆ ಮಾಡಲು ನ್ಯಾಯಾಲಯವು ಆದೇಶಿಸಿತ್ತು.

ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ಮುಂದೆ ಹಾಜರಾಗಲು ನೋಟಿಸ್ ಕಳುಹಿಸುವುದನ್ನು ಕಡ್ಡಾಯಗೊಳಿಸುವ ಸಿಆರ್‌ಪಿಸಿ ಸೆಕ್ಷನ್ 41ಎ ಅನ್ನು ಈ ಬಂಧನ ಉಲ್ಲಂಘಿಸಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಚಂದಾ ಕೋಚರ್‌ ಪರ ಹಿರಿಯ ವಕೀಲ ಅಮಿತ್ ದೇಸಾಯಿ, ಸಿಬಿಐ ಪರ ವಕೀಲ ಕುಲದೀಪ್ ಪಾಟೀಲ್ ವಾದ ಮಂಡಿಸಿದರು.

Related Stories

No stories found.
Kannada Bar & Bench
kannada.barandbench.com