ಚಂಡೀಗಢ ಮೇಯರ್ ಚುನಾವಣೆ: 'ಕೈ ಮೇಲೆ ಎತ್ತಿ' ಮಾಡುವ ಮತದಾನಕ್ಕೆ ಅವಕಾಶ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಜನವರಿ 30ರಂದು ನಿಗದಿಯಾಗಿರುವ ಚುನಾವಣೆಯನ್ನು ರಹಸ್ಯ ಮತದಾನದ ಬದಲು ಕೈ ಮೇಲೆತ್ತಿ ಮತ ಚಲಾಯಿಸಲು ಆದೇಶಿಸುವಂತೆ ಎಎಪಿಯ ಕುಲದೀಪ್ ಕುಮಾರ್ ಕೋರಿದ್ದಾರೆ.
Supreme Court, Chandigarh Mayor Polls; RO Anil Masih (R) who presided over the polls in 2024
Supreme Court, Chandigarh Mayor Polls; RO Anil Masih (R) who presided over the polls in 2024
Published on

ಚಂಡೀಗಢ ಮೇಯರ್ ಚುನಾವಣೆಗೆ ಜನವರಿ 30ರಂದು ನಡೆಯಲಿರುವ ರಹಸ್ಯ ಮತದಾನದ ಬದಲು 'ಕೈ ಮೇಲೆತ್ತಿ' ಮತ ಚಲಾಯಿಸಲು ಅವಕಾಶ ಕಲ್ಪಿಸಬೇಕು ಎಂದು ಚಂಡೀಗಢ ಮೇಯರ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಕುಲದೀಪ್ ಕುಮಾರ್ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

 ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸ್ವತಂತ್ರ ವೀಕ್ಷಕರನ್ನು ನೇಮಿಸಬಹುದೇ ಎಂಬ ಸೀಮಿತ ಅಂಶಕ್ಕೆ ಸಂಬಂಧಿಸಿದಂತೆ ಶುಕ್ರವಾರ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು ಚಂಡೀಗಢ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

Also Read
ಚಂಡೀಗಢ ಮೇಯರ್ ಚುನಾವಣೆ: ಸುಪ್ರೀಂ ಕೋರ್ಟ್‌ನಲ್ಲಿ ಬೇಷರತ್ ಕ್ಷಮೆ ಯಾಚಿಸಿದ ಚುನಾವಣಾಧಿಕಾರಿ ಅನಿಲ್ ಮಸೀಹ್‌

ಚುನಾವಣೆಯ ಸಮಯದಲ್ಲಿ ಮತದಾರರು ಮುಕ್ತ ಮತ್ತು ನ್ಯಾಯಯುತ ಆಯ್ಕೆಗಳನ್ನು ಹೊಂದಿರಬೇಕು ಎಂಬುದು ಕುಮಾರ್ ಎತ್ತಿದ ಪ್ರಮುಖ ಕಾಳಜಿಯಾಗಿದೆ ಎಂದ ನ್ಯಾಯಾಲಯ ಇದನ್ನು ಖಾತ್ರಿಪಡಿಸಿಕೊಳ್ಳುತ್ತೇವೆ ಎಂಬುದಾಗಿ ನುಡಿಯಿತು.

"ಜನವರಿ 30, 2025 ರಂದು ನಡೆಯಲಿರುವ ಚುನಾವಣೆಯನ್ನು ನಡೆಸಲು ಸ್ವತಂತ್ರ ವೀಕ್ಷಕರನ್ನು ನೇಮಿಸುವ ಸೀಮಿತ ಉದ್ದೇಶಕ್ಕಾಗಿ ನೋಟಿಸ್ ನೀಡಿ. ಚುನಾವಣಾ ಪ್ರಕ್ರಿಯೆಯು ಮುಂದುವರಿಯುತ್ತದೆ," ಎಂದು ಕೋರ್ಟ್ ಆದೇಶಕ್ಕೆ ಮುಂದಾಯಿತು.

ಈ ನಡುವೆ ಚುನಾವಣಾ ಪ್ರಕ್ರಿಯೆ ಮುಂದುವರಿಯಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಚುನಾವಣೆಯ ಮೇಲ್ವಿಚಾರಣೆಗೆ ನಿವೃತ್ತ ನ್ಯಾಯಾಧೀಶರನ್ನು ನೇಮಿಸುವ ಇಂಗಿತ ವ್ಯಕ್ತಪಡಿಸಿದೆ.  

ಶುಕ್ರವಾರ ಕುಮಾರ್ ಪರವಾಗಿ ಹಿರಿಯ ವಕೀಲ ಗುರ್ಮಿಂದರ್ ಸಿಂಗ್ ಅವರು ಚಂಡೀಗಢದಲ್ಲಿ 2024ರ ಮೇಯರ್ ಚುನಾವಣೆಯ ಸಂದರ್ಭದಲ್ಲಿ ನಡೆದ ಅಕ್ರಮಗಳನ್ನು ವಿವರಿಸಿದರು.  ಬಿಜೆಪಿ ಅಭ್ಯರ್ಥಿ ವಿಜೇತ ಎಂದು ಘೋಷಿಸಲು ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರು ಮತಪತ್ರಗಳನ್ನು ವಿರೂಪಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಳೆದ ವರ್ಷ ಇದೇ ಎಎಪಿ ಅಭ್ಯರ್ಥಿ ಕುಲದೀಪ್‌ ಕುಮಾರ್‌ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಪ್ರಕಟಿಸಿದ್ದ ಫಲಿತಾಂಶ ರದ್ದುಗೊಳಿಸಿ ಕುಮಾರ್‌ ಅವರನ್ನು ಮೇಯರ್‌ ಚುನಾವಣೆಯ ವಿಜೇತ ಎಂದು ತೀರ್ಪು ನೀಡಲಾಗಿತ್ತು.

Also Read
ಚಂಡೀಗಢ ಮೇಯರ್ ಚುನಾವಣೆ: ಎಎಪಿ ಅಭ್ಯರ್ಥಿಯ ಗೆಲುವು ಘೋಷಿಸಿದ ಸುಪ್ರೀಂ ಕೋರ್ಟ್

ಬರಲಿರುವ ಮೇಯರ್‌ ಚುನಾವಣೆಯಲ್ಲಿ ಇಂಥದ್ದೇ ಸಮಸ್ಯೆ ಎದುರಾಗುವುದನ್ನು ತಪ್ಪಿಸಲು ಕೈ ಮೇಲೆತ್ತಿ ಮತ ಚಲಾಯಿಸಲು ನಿರ್ದೇಶನ ನೀಡುವಂತೆ ಕುಮಾರ್‌ ಇದೀಗ ನ್ಯಾಯಾಲಯವನ್ನು ಕೋರಿದ್ದಾರೆ.

ಈ ವರ್ಷ ಚುನಾವಣೆಗಳು ನ್ಯಾಯಯುತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಪಂಜಾಬ್ ಅಥವಾ ಹರಿಯಾಣದಿಂದ ತಟಸ್ಥ ವೀಕ್ಷಕರನ್ನು ನೇಮಿಸುವಂತೆ ಕುಮಾರ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಗುರುಮಿಂದರ್‌ ಸಿಂಗ್ ಸಲಹೆ ನೀಡಿದರು. ಪ್ರತಿಯಾಗಿ ನ್ಯಾಯಾಲಯ ಈ ಪ್ರಸ್ತಾಪದ ಬಗ್ಗೆ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದ್ದು ಜನವರಿ 27, 2025ರಂದು ಮತ್ತೆ ವಿಚಾರಣೆ ನಡೆಸಲಿದೆ.

Kannada Bar & Bench
kannada.barandbench.com