ಚಂಡೀಗಢ ಮೇಯರ್ ಚುನಾವಣೆ ಫಲಿತಾಂಶಕ್ಕೆ ತ್ವರಿತ ತಡೆ ನೀಡಲು ಹೈಕೋರ್ಟ್‌ ನಕಾರ: ಸುಪ್ರೀಂ ಮೆಟ್ಟಿಲೇರಿದ ಎಎಪಿ ಕೌನ್ಸಿಲರ್

ಬಿಜೆಪಿ ವಂಚನೆ ಮೂಲಕ ಗೆಲುವು ಸಾಧಿಸಿದ್ದು ಎಂಟು ಮತಗಳನ್ನು ಫೋರ್ಜರಿ ಮಾಡಿ ತಿರಸ್ಕರಿಸಲಾಗಿದೆ ಎಂದು ಆರೋಪಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನಿನ್ನೆ ನೋಟಿಸ್‌ ನೀಡಿದ್ದ ಹೈಕೋರ್ಟ್‌ ಮೂರು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು.
ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ

ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದ ಚುನಾವಣಾ ಫಲಿತಾಂಶಕ್ಕೆ ತಕ್ಷಣ ತಡೆ ನೀಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ ಪಾಲಿಕೆ ಸದಸ್ಯ ಕುಲದೀಪ್ ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಕಾಂಗ್ರೆಸ್-ಎಎಪಿ ಅಭ್ಯರ್ಥಿ ನಿತೀಶ್ ಕುಮಾರ್ 12 ಮತಗಳನ್ನು ಪಡೆದರೆ, ಬಿಜೆಪಿಯ ಮನೋಜ್ ಸೋಂಕರ್ 16 ಮತಗಳನ್ನು ಪಡೆದು ಮೇಯರ್ ಆಗಿ ಆಯ್ಕೆಯಾಗಿದ್ದರು. ಮತದಾನ ಪ್ರಕ್ರಿಯೆಯಲ್ಲಿ ಎಂಟು ಮತಗಳು ಅಮಾನ್ಯವೆಂದು ತಿರಸ್ಕತವಾಗಿದ್ದವು.

ಬಿಜೆಪಿ ವಂಚನೆ ಮೂಲಕ ಗೆಲುವು ಸಾಧಿಸಿದ್ದು ಎಂಟು ಮತಗಳನ್ನು ಫೋರ್ಜರಿ ಮಾಡಿ ತಿರಸ್ಕರಿಸಲಾಗಿದೆ ಎಂದು ಆರೋಪಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಬುಧವಾರ ನೋಟಿಸ್‌ ನೀಡಿದ್ದ ಹೈಕೋರ್ಟ್‌ ಮೂರು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು.

ಹೈಕೋರ್ಟ್‌ ವಿಚಾರಣೆ ಮುಕ್ತಾಯಗೊಳ್ಳುತ್ತಿದ್ದಂತೆ ಎಎಪಿ ನಾಯಕ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರು ತ್ವರಿತ ವಿಚಾರಣೆ ಕೋರಿ ಪಕ್ಷ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲಿದೆ ಎಂದು ತಿಳಿಸಿದ್ದರು.

ಹೈಕೋರ್ಟ್ ಆದೇಶದ ವಿರುದ್ಧ ಇಂದು (ಗುರುವಾರ) ಬೆಳಿಗ್ಗೆ ವಿಶೇಷ ಅನುಮತಿ ಅರ್ಜಿ ಸಲ್ಲಿಸಲಾಗಿದೆ.

ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕೆಂದು ಕುಮಾರ್ ಹೈಕೋರ್ಟ್‌ ಎದುರು ನಿನ್ನೆ ಪ್ರಾರ್ಥಿಸಿದ್ದರು.

Kannada Bar & Bench
kannada.barandbench.com