[ಚಂಡೀಗಢ ಮೇಯರ್ ಚುನಾವಣೆ] ಅಧಿಕಾರಿಗೆ ಬೆವರಿಳಿಸಿದ ಸುಪ್ರೀಂ ಕೋರ್ಟ್‌: ಕುದುರೆ ವ್ಯಾಪಾರದಿಂದ ತೊಂದರೆ ಎಂದ ಪೀಠ

ಮತ ಎಣಿಕೆಯ ಸಮಯದಲ್ಲಿ ಚುನಾವಣಾಧಿಕಾರಿ ವರ್ತನೆ ಕುರಿತು ಕೆಂಡಾಮಂಡಲರಾದ ಸಿಜೆಐ ಚಂದ್ರಚೂಡ್ ಮತಪತ್ರಗಳಲ್ಲಿ ಟಿಕ್ ಮತ್ತು ಇಂಟೂ ಮಾರ್ಕ್‌ಗಳನ್ನು ಹಾಕುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಸುಪ್ರೀಂ ಕೋರ್ಟ್, ಎಎಪಿ, ಕಾಂಗ್ರೆಸ್ ಮತ್ತು ಬಿಜೆಪಿ
ಸುಪ್ರೀಂ ಕೋರ್ಟ್, ಎಎಪಿ, ಕಾಂಗ್ರೆಸ್ ಮತ್ತು ಬಿಜೆಪಿ

ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್‌ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಮತಪತ್ರವನ್ನು ವಿರೂಪಗೊಳಿಸಿದ ಚುನಾವಣಾಧಿಕಾರಿ (ಆರ್‌ ಒ- ರಿಟರ್ನಿಂಗ್‌ ಆಫೀಸರ್‌) ಅನಿಲ್ ಮಾಸಿಹ್ ಅವರನ್ನು ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌ ಮತ ಎಣಿಸಬೇಕಿದ್ದ ಅಧಿಕಾರಿ ಮತಪತ್ರಗಳಲ್ಲಿ ಟಿಕ್‌ ಮತ್ತು ಇಂಟೂ ಮಾರ್ಕ್‌ಗಳನ್ನು ಹಾಕಿದ್ದು ಏಕೆ ಎಂದು ಪ್ರಶ್ನಿಸಿತು (ಕುಲದೀಪ್ ಕುಮಾರ್ ಮತ್ತು ಚಂಡೀಗಢ ಕೇಂದ್ರಾಡಳಿತ ಸರ್ಕಾರ ಮತ್ತಿತರರ ನಡುವಣ ಪ್ರಕರಣ)

ನ್ಯಾಯಾಲಯಕ್ಕೆ ಸುಳ್ಳು ಹೇಳಲು ಯತ್ನಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೂಡ ನ್ಯಾಯಾಲಯ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿತು.

"ಇದು ಬಹಳ ಗಂಭೀರ ವಿಷಯ. ಯಾವುದೇ ಸುಳ್ಳು ಹೇಳಿದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ... ನೀವು ಕ್ಯಾಮೆರಾವನ್ನು ನೋಡುತ್ತಾ ಮತಪತ್ರಗಳಲ್ಲಿ ಏಕೆ ಗುರುತುಹಾಕುತ್ತಿದ್ದೀರಿ?" ಎಂದು ಸಿಜೆಐ ಚಂದ್ರಚೂಡ್ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಾಸಿಹ್‌, ವಿರೂಪಗೊಂಡ ಮತಪತ್ರಗಳನ್ನು "ಗುರುತು" ಮಾಡುತ್ತಿದ್ದೆ ಮತ್ತು ಎಣಿಕೆ ಪ್ರದೇಶದ ಅನೇಕ ಸಿಸಿಟಿವಿ ಕ್ಯಾಮೆರಾಗಳಲ್ಲಿ ಒಂದನ್ನು ನೋಡಿದ್ದೇನೆ ಎಂದರು.

ಬೇರ್ಪಡಿಸಲೆಂದಷ್ಟೇ ಎಂಟು ಮತಪತ್ರಗಳನ್ನು ಬೇರ್ಪಡಿಸಿದೆ ಎಂಬ ಆರ್‌ಒ ಅವರ ವಿವರಣೆಯಿಂದ ಸಿಜೆಐ ತೃಪ್ತರಾಗಲಿಲ್ಲ.

"ನೀವು ಮತಪತ್ರಗಳಿಗೆ ಸಹಿ ಹಾಕಬಹುದು ... ಆ ಮತಪತ್ರಗಳಲ್ಲಿ X ಗುರುತನ್ನು ಹಾಕುವುದು ಏಕೆ?... ಆ ಮತಪತ್ರಗಳಲ್ಲಿ ನೀವು ಟಿಕ್ ಅಥವಾ X ಅನ್ನು ಹಾಕಬಹುದು ಎಂದು ಯಾವ ನಿಯಮ ಹೇಳುತ್ತದೆ? ... ಅವರನ್ನು (ಮಾಸಿಹ್) ವಿಚಾರಣೆಗೆ ಒಳಪಡಿಸಬೇಕು. ಚುನಾವಣಾ ಪ್ರಜಾಪ್ರಭುತ್ವದಲ್ಲಿ ಇದನ್ನು ಅನುಮತಿಸಲಾಗುವುದಿಲ್ಲ" ಎಂದು ಸಿಜೆಐ ಹೇಳಿದರು.

ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದ ಚುನಾವಣಾ ಫಲಿತಾಂಶಕ್ಕೆ ತಕ್ಷಣ ತಡೆ ನೀಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ ಪಾಲಿಕೆ ಸದಸ್ಯ ಕುಲದೀಪ್ ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ಸಿಜೆಐ ಅವರಲ್ಲದೆ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರನ್ನೊಳಗೊಂಡ ಪೀಠ ಕೂಡ ವಿಚಾರಣೆ ನಡೆಸಿತು.

ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ
ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ

ವಿಶೇಷವೆಂದರೆ, ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳದಲ್ಲಿ ಇರುವಾಗಲೇ ಹೀಗೆ ಆಯ್ಕೆಯಾಗಿದ್ದ ಮೇಯರ್ ನಿನ್ನೆ ರಾಜೀನಾಮೆ ನೀಡಿದ್ದು ಇದೇ ವೇಳೆ ಮೂವರು ಎಎಪಿ ಪಾಲಿಕೆ ಸದಸ್ಯರು ಬಿಜೆಪಿಗೆ ಪಕ್ಷಾಂತರ ಮಾಡಿದ್ದರು.

ಈ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಜೆಐ "ಕುದುರೆ ವ್ಯಾಪಾರದಿಂದ (ಶಾಸಕರ ಖರೀದಿ) ತೊಂದರೆಗೆ ಒಳಗಾಗಿದ್ದೇವೆ" ಎಂದು ಪ್ರತಿಕ್ರಿಯಿಸಿದರು.

ಸದ್ಯಕ್ಕೆ, ಮತಪತ್ರಗಳನ್ನು (ಪ್ರಸ್ತುತ ಹೈಕೋರ್ಟ್ ವಶದಲ್ಲಿದೆ) ಮತ್ತು ಮೇಯರ್ ಚುನಾವಣೆಯ ಎಣಿಕೆ ಪ್ರಕ್ರಿಯೆಯ ವೀಡಿಯೊವನ್ನು ಹಾಜರುಪಡಿಸುವಂತೆ ನ್ಯಾಯಾಲಯ ಆದೇಶಿಸಿದೆ.

ರಿಟರ್ನಿಂಗ್ ಅಧಿಕಾರಿ ಅನಿಲ್ ಮಾಸಿಹ್ ಅವರು ನಾಳೆಯೂ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಿರಬೇಕೆಂದು ಪೀಠ ಆದೇಶಿಸಿತು.

ಚುನಾವಣಾ ಪ್ರಕ್ರಿಯೆಯನ್ನು ಪುನರಾರಂಭಿಸಲು ಅನುಮತಿಸುವ ಮೊದಲು ಪುರಸಭೆ ಚುನಾವಣೆಗೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರದ ಹೊಸ ರಿಟರ್ನಿಂಗ್ ಅಧಿಕಾರಿಯನ್ನು ನೇಮಿಸುವಂತೆ ಪೀಠ ಸೂಚಿಸಿತು.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಮತ ಎಣಿಕೆ ಇತ್ಯಾದಿಗಳ ಮೇಲ್ವಿಚಾರಣೆಯನ್ನು ವಹಿಸಲಾಗುವುದು ಎಂದು ಅದು ಈ ಸಂದರ್ಭದಲ್ಲಿ ತಿಳಿಸಿತು.

ಅರ್ಜಿದಾರ-ಎಎಪಿ ಕೌನ್ಸಿಲರ್ ಪರವಾಗಿ ಪಂಜಾಬ್‌ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್, ವಕೀಲರಾದ ಆರ್‌ಪಿಎಸ್‌ ಬಾರಾ, ಫೆರ್ರಿ ಸೋಫತ್, ಕುಲದೀಪ್ ಕೌರ್ ವಾದ ಮಂಡಿಸಿದ್ದರು.

ಚಂಡೀಗಢ ಆಡಳಿತದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಿದ್ದರು.

Kannada Bar & Bench
kannada.barandbench.com