ಚಂದ್ರಶೇಖರ್‌ ಆತ್ಮಹತ್ಯೆ: ಆರೋಪ ಪಟ್ಟಿ ರದ್ದು ಕೋರಿ ಹೈಕೋರ್ಟ್‌ ಮೊರೆಹೋದ ವಾಲ್ಮೀಕಿ ನಿಗಮದ ಮಾಜಿ ಎಂಡಿ ಪದ್ಮನಾಭ

ಎಸ್‌ಸಿ/ಎಸ್‌ಟಿಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆ ಸೆಕ್ಷನ್‌ 3(2)(v) ಮತ್ತು ಐಪಿಸಿ ಸೆಕ್ಷನ್‌ 306 ಹಾಗೂ 34ರ ಅಡಿ ಅಪರಾಧಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನ್ಯಾಯಾಲಯಕ್ಕೆ ಸಿಐಡಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ.
KMVSTDCL and Karnataka HC
KMVSTDCL and Karnataka HC
Published on

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಅಕೌಂಟೆಂಟ್‌ ಆಗಿದ್ದ ಪಿ ಚಂದ್ರಶೇಖರ್‌ ಅವರ ಆತ್ಮಹತ್ಯೆ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿ ವಜಾಗೊಳಿಸಲು ಕೋರಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ ಜಿ ಪದ್ಮನಾಭ ಸಲ್ಲಿಸಿರುವ ಅರ್ಜಿಯ ಕುರಿತು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ.

ಸಿಐಡಿ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆ ಸೆಕ್ಷನ್‌ 3(2)(v) ಮತ್ತು ಐಪಿಸಿ ಸೆಕ್ಷನ್‌ 306 ಹಾಗೂ 34ರ ಅಡಿ ಅಪರಾಧಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿ ವಜಾಗೊಳಿಸುವಂತೆ ಕೋರಿ ಪದ್ಮನಾಭ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು, “ಚಂದ್ರಶೇಖರ್‌ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಸಂಬಂಧಿತ ಪ್ರಕರಣದಲ್ಲಿ ಪದ್ಮನಾಭ ಮತ್ತು ಇತರರ ನಡುವೆ ಹೊಂದಾಣಿಕೆ ಇತ್ತು ಎಂಬುದಕ್ಕೆ ದಾಖಲೆ ಇದ್ದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂದರು.

ಇದನ್ನು ಆಲಿಸಿದ ಪೀಠವು ಸಿಐಡಿಗೆ ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಿತು.

Also Read
ವಾಲ್ಮೀಕಿ ನಿಗಮದ ಹಗರಣ: ಮಾಜಿ ಎಂಡಿ ಪದ್ಮನಾಭ, ಸ್ಟಾಕ್‌ ಬ್ರೋಕರ್‌ ಶ್ರೀನಿವಾಸ್‌ ರಾವ್‌ಗೆ ಜಾಮೀನು ನಿರಾಕರಣೆ

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಪಿ ಚಂದ್ರಶೇಖರ್‌ ಅವರು ರಜೆಯ ನಿಮಿತ್ತ 2024ರ ಮೇ 25, 26ರಂದು ಶಿವಮೊಗ್ಗದ ತಮ್ಮ ನಿವಾಸಕ್ಕೆ ಬಂದಿದ್ದರು. ಪತ್ನಿ ಇಲ್ಲದ ಸಮಯದಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಚಂದ್ರಶೇಖರ್‌ ಮನೆಯಲ್ಲಿ ಮರಣ ಪತ್ರ ದೊರೆತಿದ್ದು, ಅದರಲ್ಲಿ ವಾಲ್ಮೀಕಿ ನಿಗಮದ 80-85 ಕೋಟಿ ರೂಪಾಯಿ ಹಣವನ್ನು ಜೆ ಜಿ ಪದ್ಮನಾಭ, ನಿಗಮದ ಲೆಕ್ಕಾಧಿಕಾರಿ ಪರಶುರಾಮ್‌ ದುರಗಣ್ಣವರ್‌ ಮತ್ತು ಬೆಂಗಳೂರಿನ ಎಂ ಜಿ ರಸ್ತೆಯಲ್ಲಿರುವ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮುಖ್ಯ ವ್ಯವಸ್ಥಾಪಕಿ ಶುಚಿಸ್ಮಿತಾ ರಾವುಲ್‌ ಅವರು ಅಕ್ರಮವಾಗಿ ಲೂಟಿ ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ಈ ಹಿನ್ನೆಲೆಯಲ್ಲಿ ಒತ್ತಡದಲ್ಲಿ ತಮ್ಮ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಚಂದ್ರಶೇಖರ್‌ ಅವರ ಪತ್ನಿ ಕವಿತಾ ಅವರು ಶಿವಮೊಗ್ಗದ ವಿನೋಬಾ ನಗರದ ಠಾಣೆಯಲ್ಲಿ 2024ರ ಮೇ 27ರಂದು ದೂರು ನೀಡಿದ್ದರು. ಇದರ ಅನ್ವಯ ಮೂವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 306 ಜೊತೆಗೆ 34ರ ಅಡಿ ಪ್ರಕರಣ ದಾಖಲಾಗಿತ್ತು. 

ಈ ಪ್ರಕರಣದಲ್ಲಿ ಶುಚಿಸ್ಮಿತಾ ಅವರ ವಿರುದ್ಧ ಆರೋಪ ಕೈಬಿಡಲಾಗಿದೆ. ಪದ್ಮನಾಭ ಮತ್ತು ದುರಗಣ್ಣವರ್‌ಗೆ ಜಾಮೀನು ದೊರೆತಿದೆ.

Kannada Bar & Bench
kannada.barandbench.com