ಕ್ರಿಮಿನಲ್ ವಿಚಾರಣೆಯಲ್ಲಿ ಪಕ್ಷಕಾರರು ವಕೀಲರನ್ನು ಬದಲಿಸಿದ್ದಾರೆ ಎಂಬ ಏಕೈಕ ಕಾರಣಕ್ಕೆ ಸಾಕ್ಷಿಯನ್ನು ಮರು ಕರೆಸಲು ಆಧಾರವಾಗದು ಎಂದು ಈಚೆಗೆ ಕರ್ನಾಟಕ ಹೈಕೋರ್ಟ್ ಪುನರುಚ್ಚರಿಸಿದೆ.
ಈಗಾಗಲೇ ಸಾಕ್ಷಿ ನುಡಿದಿರುವವರನ್ನು ಪುನಾ ಏಕೆ ಕರೆಸಬೇಕು ಎಂಬುದಕ್ಕೆ ಕಾರಣಗಳನ್ನು ಒಳಗೊಂಡ ಅರ್ಜಿಯನ್ನು ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಹೇಳಿದೆ.
ಪ್ರಕರಣವನ್ನು ಆಧರಿಸಿ ಅಪರಾಧ ದಂಡ ಪ್ರಕ್ರಿಯಾ ಸಂಹಿತಾ ಸೆಕ್ಷನ್ 311 ರ ಅಡಿ (ಈಗ ಬಿಎನ್‌ಎಸ್‌ಎಸ್) ಅದಕ್ಕೆ ಅನುಮತಿಸಬಹುದು. ಸಾಕ್ಷ್ಯವನ್ನು ಮರು ಕರೆಯಿಸದಿದ್ದರೆ ನ್ಯಾಯದಾನ ಅಸಾಧ್ಯವೆನಿಸಿದಾಗ ಹೀಗೆ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.
“ಸಾಕ್ಷಿಯನ್ನು ಮರು ಕರೆಸಲು ವಕೀಲರನ್ನು ಬದಲಿಸುವುದು ಆಧಾರವಾಗದು. ಸಾಕ್ಷಿಯನ್ನು ಏಕೆ ಮರು ಕರೆಸಬೇಕು ಎಂಬುದರ ವಿವರವನ್ನು ಅರ್ಜಿ ಒಳಗೊಂಡಿರಬೇಕು. ವಿಚಾರಣೆಯ ಕೊನೆಯಲ್ಲಿ ಸಾಕ್ಷಿಯನ್ನು ಮರು ಕರೆಸಲು ಅನುಮತಿಸಬಾರದು. ಸುಪ್ರೀಂ ಕೋರ್ಟ್ ಈ ಸಂಬಂಧ ವಿಸ್ತೃತ ತತ್ವಗಳನ್ನು ರೂಪಿಸಿದೆ” ಎಂದು ಹೈಕೋರ್ಟ್ ಹೇಳಿದೆ.
2017ರ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಾಕ್ಷಿ ಮರು ಕರೆಸಲು ನಿರಾಕರಿಸಿ ವಿಚಾರಣಾಧೀನ ನ್ಯಾಯಾಲಯ ಮಾಡಿದ್ದ ಆದೇಶವನ್ನು ಎತ್ತಿ ಹಿಡಿಯುವಾಗ ಹೈಕೋರ್ಟ್ ಮೇಲಿನಂತೆ ಹೇಳಿದೆ.
ಚೆಕ್ ಬೌನ್ಸ್ ದೂರು ದಾಖಲಿಸಿದ್ದ ಪ್ರಕರಣದಲ್ಲಿ ಕಂಪನಿಯ ಉದ್ಯೋಗಿಯಾಗಿರುವ ವ್ಯಕ್ತಿಯು ಸಾಕ್ಷಿಯಾಗಿದ್ದಾರೆ. ಅಪೂರ್ಣ ರಸ್ತೆ ಕಾಮಗಾರಿಗೆ ಈಗಾಗಲೇ ಪಾವತಿಸಲಾಗಿದ್ದ ಮುಂಗಡ ಹಣವನ್ನು ಮರಳಿಸುವ ಸಂಬಂಧ ಎರಡು ಕಂಪೆನಿಗಳು ಮತ್ತು ಅವರ ಪ್ರತಿನಿಧಿಗಳು ನಕಲಿ ಚೆಕ್ ನೀಡಿದ್ದಕ್ಕೆ ದೂರು ದಾಖಲಿಸಲಾಗಿತ್ತು. 2019 ಮತ್ತು 2021ರಲ್ಲಿ ಆರೋಪಿಗಳ ಪರ ವಕೀಲರು ಸಾಕ್ಷಿಯನ್ನು (ಕಂಪೆನಿ ಉದ್ಯೋಗಿ) ಪಾಟೀ ಸವಾಲಿಗೆ ಒಳಪಡಿಸಿದ್ದರು. ತಮ್ಮ ಹಿಂದಿನ ವಕೀಲರು ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ಆರೋಪಿಗಳ ಹೊಸ ವಕೀಲರನ್ನು ನೇಮಿಸಿಕೊಂಡಿದ್ದರು. ಆ ವಕೀಲರು ಪಾಟೀ ಸವಾಲಿನ ಅವದಿಯಲ್ಲಿ ಅಂತರ ಇರುವುದನ್ನು ಕಂಡು ಸಾಕ್ಷಿಯನ್ನು ಮರಳಿ ಕರೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಆರೋಪಿ/ಅರ್ಜಿದಾರರಿಗೆ ಸಾಕ್ಷಿಯನ್ನು ಪಾಟೀ ಸವಾಲಿಗೆ ಒಳಪಡಿಸಲು ಒಂದಲ್ಲ ಎರಡು ಬಾರಿ ಅವಕಾಶ ಕಲ್ಪಿಸಲಾಗಿದೆ ಎಂದಿರುವ ಹೈಕೋರ್ಟ್ ನಾಲ್ಕು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಆದೇಶಿಸಿದೆ.