'ಭಾರತ್‌ ಮಾತಾ ಕಿ ಜೈʼ ಘೋಷಣೆಯಿಂದ ಸಾಮರಸ್ಯ ಉತ್ತೇಜನೆಯಾಗುತ್ತದೆಯೇ ವಿನಾ ವೈಷಮ್ಯವಲ್ಲ: ಹೈಕೋರ್ಟ್‌

ಅರ್ಜಿದಾರರು ಹೂಡಿದ್ದ ಪ್ರಕರಣಕ್ಕೆ ಪ್ರತಿಯಾಗಿ ಹೂಡಿದ್ದ ಪ್ರಕರಣ ಇದಾಗಿದೆ. ಇದರಲ್ಲಿ ಐಪಿಸಿ ಸೆಕ್ಷನ್‌ 153ಎ ಅನ್ವಯವಾಗುವ ಒಂದೇ ಒಂದು ಅಂಶವೂ ಇಲ್ಲ ಎಂದು ನ್ಯಾಯಾಲಯ ಹೇಳಿದೆ.
Justice M Nagaprasanna and Karnataka HC
Justice M Nagaprasanna and Karnataka HC
Published on

“ಭಾರತ್‌ ಮಾತಾ ಕಿ ಜೈ” ಘೋಷಣೆಯು ಸಾಮರಸ್ಯ ಉತ್ತೇಜಿಸುತ್ತದೆಯೇ ಹೊರತು ವೈಷಮ್ಯ ಹರಡುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದೆ.

ಮಸೀದಿ ಮುಂದೆ ಪ್ರತಿಭಟನೆ ನಡೆಸಿ “ಭಾರತ್‌ ಮಾತಾ ಕಿ ಜೈ” ಎಂದು ಘೋಷಣೆ ಕೂಗಿದ ಸಂಬಂಧ ಎರಡು ಧರ್ಮಗಳ ವಿರುದ್ಧ ದ್ವೇಷ ಹರಡುವ ಆರೋಪದ ಮೇಲೆ ಮಂಗಳೂರಿನ ಸುರೇಶ್‌, ಎಂ ವಿನಯ್‌ ಕುಮಾರ್‌, ಸುಭಾಷ್‌, ರಂಜನ್‌ ಅಲಿಯಾಸ್‌ ರಂಜಿತ್‌ ಮತ್ತು ಧನಂಜಯ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಅರ್ಜಿದಾರರು ಹೂಡಿದ್ದ ಪ್ರಕರಣಕ್ಕೆ ಪ್ರತಿಯಾಗಿ ಹೂಡಿದ್ದ ಪ್ರಕರಣ ಇದಾಗಿದೆ. ಇದರಲ್ಲಿ ಐಪಿಸಿ ಸೆಕ್ಷನ್‌ 153ಎ ಅನ್ವಯವಾಗುವ ಒಂದೇ ಒಂದು ಅಂಶವೂ ಇಲ್ಲ. ವಾಸ್ತವವಾಗಿ ಧರ್ಮ, ಭಾಷೆ ಸೇರಿದಂತೆ ನಾನಾ ಅಂಶಗಳನ್ನು ಮುಂದಿಟ್ಟುಕೊಂಡು ಬೇರೆ ಬೇರೆ ಗುಂಪುಗಳ ನಡುವೆ ದ್ವೇಷ ಭಾವನೆ ಮೂಡಿಸುವ ಘಟನೆ ನಡೆದಿರಬೇಕಾಗುತ್ತದೆ. ಆದರೆ ಇಲ್ಲಿ ಅಂತಹ ಘಟನೆ ನಡೆದಿಲ್ಲ. ಈ ಪ್ರಕರಣ ಐಪಿಸಿ ಸೆಕ್ಷನ್‌ 153 ದುರ್ಬಳಕೆಗೆ ಸ್ಪಷ್ಟ ಉದಾಹರಣೆಯಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ವಾಸ್ತವ ಅಂಶಗಳನ್ನು ಪರಿಗಣಿಸಿದರೆ ಭಾರತ್‌ ಮಾತಾ ಕಿ ಘೋಷಣೆ ಕೂಗಿರುವುದು ಸಾಮರಸ್ಯ ಉತ್ತೇಜಿಸುತ್ತದೆಯೇ ಹೊರತು ದ್ವೇಷವನ್ನಲ್ಲ. ಭಾರತ್‌ ಮಾತಾ ಕಿ ಜೈ ಘೋಷಣೆಯ ಜೊತೆಗೆ ಪ್ರಧಾನ ಮಂತ್ರಿಯನ್ನು ಹೊಗಳಿದ್ದಾರೆ. ದೂರಿನಲ್ಲೂ ಕೂಡ ಯಾವ ಅಂಶಗಳನ್ನೂ ಉಲ್ಲೇಖಿಸಿಲ್ಲ. ಹಾಗಾಗಿ ಪ್ರಕರಣ ರದ್ದುಗೊಳಿಸಲಾಗುತ್ತಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಕಳೆದ ಜೂನ್‌ 9ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧಿಕಾರ ಸ್ವೀಕಾರ ಸಮಾರಂಭ ವೀಕ್ಷಣೆ ಬಳಿಕ ವಾಪಸ್ಸಾಗುತ್ತಿದ್ದಾಗ ಒಂದು ಗುಂಪು ಅರ್ಜಿದಾರರನ್ನು ಏಕೆ “ಭಾರತ್‌ ಮಾತಾ ಕಿ ಜೈ” ಎಂದು ಘೋಷಣೆ ಕೂಗುತ್ತಿದ್ದೀರಾ ಎಂದು ಆಕ್ಷೇಪಣೆ ಎತ್ತಿದ್ದರು. ಆ ಸಂದರ್ಭದಲ್ಲಿಸುಮಾರು 25 ಮಂದಿ ಅಲ್ಲಿದ್ದರು, ಅವರ ಪೈಕಿ ಒಬ್ಬರು ಅರ್ಜಿದಾರರಲ್ಲಿ ಇಬ್ಬರನ್ನು ಚಾಕುವಿಂದ ಚುಚ್ಚಿದ್ದರು.

ಆದರೆ ಮರು ದಿನ ಮುಸ್ಲಿಂ ವ್ಯಕ್ತಿ ಪಿ ಕೆ ಅಬ್ದುಲ್ಲಾ, ಅರ್ಜಿದಾರರು ಮಸೀದಿ ಮುಂದೆ ಬಂದು ಬೆದರಿಕೆ ಹಾಕಿದರು ಎಂದು ಆರೋಪಿಸಿ ಮಂಗಳೂರಿನ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪೊಲೀಸರು ಐಪಿಸಿ ಸೆಕ್ಷನ್‌ 153ಎ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿ  ಅರ್ಜಿದಾರರ ಮೇಲೆ ಪ್ರಕರಣ ದಾಖಲಿಸಿ ಎಫ್‌ಐಆರ್‌ ಮಾಡಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

ಅರ್ಜಿದಾರರ ಪರವಾಗಿ ವಕೀಲ ಸುಯೋಗ್‌ ಹೇರಳಿ ವಕಾಲತ್ತು ಹಾಕಿದ್ದು, ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ವಾದಿಸಿದರು. ಸರ್ಕಾರದ ಪರವಾಗಿ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ವಾದಿಸಿದರು.

Kannada Bar & Bench
kannada.barandbench.com