ನಿಗದಿತ ಕಾಲಾವಧಿಯೊಳಗೆ ಸಲ್ಲಿಸಲಾದ ಆರೋಪಪಟ್ಟಿಗೆ ಸಕ್ಷಮ ಪ್ರಾಧಿಕಾರದ ಅನುಮತಿ ಇರಲಿಲ್ಲ ಎಂಬ ಕಾರಣಕ್ಕಾಗಿ ಸಿಆರ್‌ಪಿಸಿ ಸೆಕ್ಷನ್ 167 (2) ಅಡಿ ಆರೋಪಿ ಡಿಫಾಲ್ಟ್ ಜಾಮೀನು ಪಡೆಯಲು ಅರ್ಹನಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ [ಜಸ್ಪೀರ್ ಸಿಂಗ್ ಮತ್ತು ಎನ್‌ಐಎ ನಡುವಣ ಪ್ರಕರಣ].
ಅಪರಾಧವನ್ನು ಸಂಜ್ಞಾನಕ್ಕೆ ತೆಗೆದುಕೊಳ್ಳುವಾಗ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯುವ ಅಗತ್ಯ ಇದೆಯೇ ಇಲ್ಲವೇ ಎಂಬುದನ್ನು ಪರಿಗಣಿಸಲಾಗುತ್ತದೆ. ಆದರೆ, ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯುವುದು ಪ್ರಾಸಿಕ್ಯೂಷನ್ ಪ್ರಕ್ರಿಯೆಯ ಭಾಗ ಎನ್ನಲಾಗದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಹೇಳಿದೆ.
ಆದ್ದರಿಂದ ಅನುಮತಿ ಪಡೆಯದ ಆರೋಪಪಟ್ಟಿ ಸಿಂಧುತ್ವವಿಲ್ಲದ ಆರೋಪಪಟ್ಟಿಯಾಗುತ್ತದೆ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಅನುಮತಿ ಪಡೆಯುವುದು ಆರೋಪಪಟ್ಟಿಯ ಭಾಗವಲ್ಲ ಮತ್ತು ತನಿಖಾ ಸಂಸ್ಥೆಗೂ ಸಕ್ಷಮ ಪ್ರಾಧಿಕಾರದ ಅನುಮತಿಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಮೂರ್ತಿ ಪರ್ದಿವಾಲಾ ಸ್ಪಷ್ಟಪಡಿಸಿದ್ದಾರೆ.
ಐಪಿಸಿ ಸೆಕ್ಷನ್ 120 ಬಿ, ಯುಎಪಿಎ ಸೆಕ್ಷನ್ 18, 19, 18 ಬಿ ಹಾಗೂ 20 ಜೊತೆಗೆ ಸ್ಫೋಟಕ ವಸ್ತುಗಳ ಕಾಯಿದೆಯ ಸೆಕ್ಷನ್ ಸೆಕ್ಷನ್ 3 ಮತ್ತು 5 ರ ಅಡಿಯಲ್ಲಿ ಆರೋಪ ಎದುರಿಸುತ್ತಿರುವ ಐವರ ಮೇಲ್ಮನವಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ. ಸಿಆರ್‌ಪಿಸಿ ಸೆಕ್ಷನ್ 167(2) ರ ಪ್ರಕಾರ ಡಿಫಾಲ್ಟ್ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಸಲ್ಲಿಸಲಾದ ಆರೋಪಪಟ್ಟಿಯು ಅಪೂರ್ಣ ಆರೋಪಟ್ಟಿಯಾಗುತ್ತದೆ. ಸೆಕ್ಷನ್ 173 (2)ರ ಅರ್ಥದಲ್ಲಿ ಪೊಲೀಸ್ ವರದಿಯ ಅಗತ್ಯವನ್ನು ಪೂರೈಸುವುದಿಲ್ಲ. ಅಂತಹ ಆರೋಪಪಟ್ಟಿ ಸಿಆರ್‌ಪಿಸಿಯ ಸೆಕ್ಷನ್ 173ರ ಉಪ ನಿಬಂಧನೆ (5) ಕ್ಕೆ ಅನುಗುಣವಾಗಿರುವುದಿಲ್ಲ ಎಂಬುದು ಮೇಲ್ಮನವಿದಾರರ ವಾದವಾಗಿತ್ತು.
[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]