ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರಿನ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಪ್ರಕರಣದ ಮೊದಲನೇ ಆರೋಪಿ ಚೈತ್ರಾ ಕುಂದಾಪುರ ಸೇರಿ ಏಳು ಮಂದಿಯ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 6ರವರೆಗೆ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯ ವಿಸ್ತರಿಸಿದೆ.
ಸಿಸಿಬಿ ಪೊಲೀಸರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಮೂರನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಶ್ರೇಯಂಸ್ ಎಸ್. ದೊಡ್ಡಮನಿ ಅವರ ಮುಂದೆ ಶನಿವಾರ ಹಾಜರುಪಡಿಸಿದರು.
ಮಾಹಿತಿ ಪಡೆದುಕೊಂಡ ಮ್ಯಾಜಿಸ್ಟ್ರೇಟ್ ಅವರು ಮತ್ತೆ 15 ದಿನ ಆರೋಪಿಗಳಾದ ಚೈತ್ರಾ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯರ್ಶಿ ಗಗನ್ ಕಡೂರು, ಚಿಕ್ಕಮಗಳೂರು ನಿವಾಸಿ ರಮೇಶ್, ಧನರಾಜ್, ಬೆಂಗಳೂರಿನ ಚನ್ನ ನಾಯಕ್, ಉಡುಪಿಯ ಶ್ರೀಕಾಂತ್, ಪ್ರಸಾದ್ ಬೈಂದೂರು ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದರು.
ಆರೋಪಿಗಳಾದ ಧನರಾಜ್, ಚನ್ನ ನಾಯಕ್ ಮತ್ತು ರಮೇಶ್ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕರಿಗೆ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ.
ಉದ್ಯಮಿ ಗೋವಿಂದ ಪೂಜಾರಿಗೆ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 1.5 ಕೋಟಿ ರೂಪಾಯಿ ಪಡೆದು ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಯಾಗಿರುವ ವಿಜಯನಗರ ಜಿಲ್ಲೆ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಬೆಂಗಳೂರಿನ ಎಸಿಎಂಎಂ ನ್ಯಾಯಾಲಯವು 10 ದಿನ ಪೊಲೀಸ್ ಕಸ್ಟಡಿಗೆ ನೀಡಿ ಬುಧವಾರ ಆದೇಶಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಹಾಲಶ್ರೀ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ನ್ಯಾಯಾಲಯ ಮುಂದೂಡಿದೆ.