ಚೆಕ್ ಬೌನ್ಸ್ ಪ್ರಕರಣದಲ್ಲಿ ಕೋಲಾರ ಜಿಲ್ಲೆ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೌಡ ಅವರನ್ನು ದೋಷಿ ಎಂದು ತೀರ್ಮಾನಿಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಂಜೇಗೌಡ ಅವರಿಗೆ ದಂಡ ವಿಧಿಸಿ ಆದೇಶಿಸಿದೆ.
ಪ್ರಕರಣದ ವಿಚಾರಣೆಯನ್ನು ವಿಶೇಷ ನ್ಯಾಯಾಧೀಶೆಯಾದ ಜೆ ಪ್ರೀತ್ ಅವರು ನಂಜೇಗೌಡ ಅವರು ₹49.65 ಲಕ್ಷ ದಂಡ ಪಾವತಿಸಬೇಕು. ವಿಫಲವಾದರೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ.
ನಂಜುಂಡೇಶ್ವರ ಸ್ಟೋನ್ ಕ್ರಷರ್ಸ್‌ನ ಮಾಲೀಕರಾದ ನಂಜೇಗೌಡ ಅವರು ಜಿ. ರಾಮಚಂದ್ರ ಎಂಬುವರಿಂದ ₹40 ಲಕ್ಷ ಸಾಲ ಪಡೆದಿದ್ದರು. ಸಾಲ ಮರುಪಾವತಿಸಲು 2018 ಹಾಗೂ 2019ರಲ್ಲಿ ನಂಜೇಗೌಡ ನೀಡಿದ್ದ ಎರಡು ಚೆಕ್‌ಗಳು ಬೌನ್ಸ್ ಆಗಿದ್ದವು. ಇದರಿಂದ, ರಾಮಚಂದ್ರ ಅವರು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಮೂರು ವರ್ಷಗಳಿಗೂ ಅಧಿಕ ಸಮಯದಿಂದ ದೂರುದಾರರು ತಮಗೆ ಬರಬೇಕಿದ್ದ ಹಣದಿಂದ ವಂಚಿತರಾಗಿದ್ದಾರೆ. ಆದ್ದರಿಂದ, ಅವರಿಗೆ ಪರಿಹಾರ ನೀಡುವ ಅಗತ್ಯವಿದ್ದು, ಈ ಮೊತ್ತವನ್ನು ನಂಜೇಗೌಡ ಪಾವತಿಸಬೇಕು. ತಪ್ಪಿದರೆ, 6 ತಿಂಗಳು ಸಾದಾ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ.
ಒಂದು ವೇಳೆ ನಂಜೇಗೌಡ ಅವರು ₹49.65 ಲಕ್ಷ ಪಾವತಿಸಿದರೆ, ಅದರಲ್ಲಿ ₹49.60 ಲಕ್ಷಗಳನ್ನು ದೂರುದಾರ ಜಿ ರಾಮಚಂದ್ರ ಅವರಿಗೆ ಹಾಗೂ ₹5 ಸಾವಿರವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.