ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ವೈ ಎಸ್ ವಿ ದತ್ತ ಅವರು ಜಂಟಿ ಮೆಮೊದ ಪ್ರಕಾರ ಸಾಲದ ಹಣ ಮರುಪಾವತಿಸದ ಹಿನ್ನೆಲೆಯಲ್ಲಿ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶನಿವಾರ ಜಾಮೀನುರಹಿತ ಬಂಧನ ವಾರೆಂಟ್ ಜಾರಿಗೊಳಿಸಿದೆ.
ದೂರುದಾರ ಸಿ ಎಸ್ ಸೋಮೇಗೌಡ ಎಂಬವರು ವರ್ಗಾವಣೀಯ ಲಿಖಿತಗಳ ಅಧಿನಿಯಮ ಸೆಕ್ಷನ್ 138ರ ಅಡಿ ದಾಖಲಿಸಿರುವ ದಾವೆಯ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (ಮ್ಯಾಜಿಸ್ಟ್ರೇಟ್) ನ್ಯಾಯಾಧೀಶೆ ಜೆ ಪ್ರೀತ್ ಅವರು ನಡೆಸಿದರು.
ಮಾರ್ಚ್ 27ರಂದು ನ್ಯಾಯಾಲಯದಲ್ಲಿ ಹಾಜರಾಗಿದ್ದ ಆರೋಪಿ ದತ್ತ ಅವರು ಏಪ್ರಿಲ್ 15ರೊಳಗೆ ಹಣ ಪಾವತಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಇಂದು ವಿಚಾರಣೆ ಆರಂಭವಾದಾಗ ದತ್ತ ಅವರು ಗೈರಾಗಿದ್ದರು. ದತ್ತ ಪರವಾಗಿ ಅವರ ವಕೀಲರು ಸಿಆರ್‌ಪಿಸಿ ಸೆಕ್ಷನ್ 317ರ ಅಡಿ ಖುದ್ದು ಹಾಜರಾತಿಗೆ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಪೀಠವು ಆರೋಪಿಯು ಜಂಟಿ ಮೆಮೊದ ಪ್ರಕಾರ ಹಣ ಪಾವತಿಸಿಲ್ಲ. ಹೀಗಾಗಿ, ಅರ್ಜಿ ತಿರಸ್ಕರಿಸಲಾಗಿದೆ. ಆರೋಪಿ ದತ್ತ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಲಾಗಿದೆ ಎಂದು ಆದೇಶದಲ್ಲಿ ಹೇಳಿದೆ. ವಿಚಾರಣೆಯನ್ನು ಏಪ್ರಿಲ್ 26ಕ್ಕೆ ಮುಂದೂಡಿದೆ.
ಇದರೊಂದಿಗೆ ಈ ಬಾರಿಯೂ ಸೇರಿದಂತೆ ಒಟ್ಟು 14 ಬಾರಿ ದತ್ತ ಅವರ ವಿರುದ್ಧ ಹಾಲಿ ಪ್ರಕರಣದಲ್ಲಿ ನ್ಯಾಯಾಲಯವು ಜಾಮೀನುರಹಿತ ಬಂಧನ ವಾರೆಂಟ್ ಹೊರಡಿಸಿದಂತಾಗಿದೆ.