ಚೆಕ್ ಬೌನ್ಸ್ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಆರ್ ಎಲ್ ಜಾಲಪ್ಪ ಪುತ್ರ ಮಾಜಿ ಶಾಸಕ ಜೆ ನರಸಿಂಹಸ್ವಾಮಿ ಅವರನ್ನು ಅಪರಾಧಿ ಎಂದು ಘೋಷಿಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ₹65 ಲಕ್ಷ ಪಾವತಿಸಲು ವಿಫಲವಾದಲ್ಲಿ ಆರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಸೋಮವಾರ ಆದೇಶಿಸಿದೆ.
ಬೆಂಗಳೂರಿನ ಪ್ರಕಾಶ್ ಕುಮಾರ್ ಯರಪ್ಪ ಅವರು ಹೂಡಿದ್ದ ದಾವೆಯ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ (ಮ್ಯಾಜಿಸ್ಟ್ರೇಟ್) ನ್ಯಾಯಾಲಯದ ನ್ಯಾಯಾಧೀಶೆ ಜೆ ಪ್ರೀತ್ ಅವರು ಆದೇಶ ಮಾಡಿದ್ದಾರೆ.
“ವರ್ಗಾವಣೀಯ ಲಿಖಿತಗಳ ಅಧಿನಿಯಮ ಸೆಕ್ಷನ್ 138ರ ಅಡಿ ಆರೋಪಿಯನ್ನು ದೋಷಿ ಎಂದು ಘೋಷಿಸಲಾಗಿದ್ದು, ಅವರು ₹65 ಲಕ್ಷ ಪಾವತಿಸಬೇಕು. ಇಲ್ಲವಾದಲ್ಲಿ ಅವರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು. ವಸೂಲಿ ಮಾಡಲಾದ ಹಣದ ಪೈಕಿ ₹64,95,000ಗಳನ್ನು ಪರಿಹಾರದ ರೂಪದಲ್ಲಿ ದೂರುದಾರ ಪ್ರಕಾಶ್ ಅವರಿಗೆ ಬಾಕಿ ₹5,000ಯನ್ನು ಸರ್ಕಾರಕ್ಕೆ ಪಾವತಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ. ಇದೇ ವೇಳೆ, ನ್ಯಾಯಾಲಯವು ಆದೇಶ ಪ್ರಶ್ನಿಸಿ ಮೇಲ್ಮನವಿ ಅಲ್ಲಿಸುವವರೆಗೂ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಬಿಟಿಎಂ ಬಡಾವಣೆ ನಿವಾಸಿ ಪ್ರಕಾಶ್ ಕುಮಾರ್ ಯರಪ್ಪ ಅವರು ಮಗಳಿಗೆ ವೈದ್ಯಕೀಯ ಸೀಟು ಕೊಡಿಸುವುದಕ್ಕೆ ಪ್ರಯತ್ನಿಸುತ್ತಿದ್ದರು. ಪ್ರಕಾಶ್ ಪತ್ನಿಯ ದೂರದ ಸಂಬಂಧಿ ಆರೋಪಿ ನರಸಿಂಹಸ್ವಾಮಿ ಅವರ ಪತ್ನಿ ನಾಗವೇಣಿಯಾಗಿದ್ದು, ಇವರು ಪತಿ ನರಸಿಂಹಸ್ವಾಮಿ ಅವರಿಗೆ ಹಲವು ಮೆಡಿಕಲ್ ಕಾಲೇಜುಗಳ ಪರಿಚಯವಿದ್ದು, ಸೀಟು ಕೊಡಿಸುವುದಾಗಿ ಭರವಸೆ ನೀಡಿದ್ದರು. ಇದಕ್ಕಾಗಿ, ₹60 ಲಕ್ಷ ವೆಚ್ಚವಾಗಲಿದ್ದು, ₹20 ಲಕ್ಷ ಮುಂಗಡವಾಗಿ ನೀಡಬೇಕು ಎಂದು ನರಸಿಂಹಸ್ವಾಮಿ ಬೇಡಿಕೆ ಇಟ್ಟಿದ್ದರು. ಇದರ ಮುಂದುವರೆದ ಭಾಗವಾಗಿ ₹10 ಲಕ್ಷ ಮತ್ತು ₹15 ಲಕ್ಷಗಳನ್ನು ನರಸಿಂಹಸ್ವಾಮಿ ಮನೆಗೆ ತಲುಪಿಸಲಾಗಿತ್ತು. ಅಲ್ಲದೇ, ನರಸಿಂಹಸ್ವಾಮಿ ಅವರ ವ್ಯವಸ್ಥಾಪಕ ಮತ್ತವರ ಪತ್ನಿ ಖಾತೆಗಳಿಗೆ ತಲಾ ₹10 ಲಕ್ಷದಂತೆ ₹20 ಲಕ್ಷ ಜಮೆ ಮಾಡಲಾಗಿತ್ತು. ಈ ಸಂಬಂಧ ಎಫ್‌ಐಆರ್ ಕೂಡ ದಾಖಲಾಗಿತ್ತು.
ನರಸಿಂಹಸ್ವಾಮಿಯವರು ಒಟ್ಟು ₹45 ಲಕ್ಷ ಪಡೆದು ಮೆಡಿಕಲ್ ಸೀಟು ಕೊಡಿಸಿಲ್ಲ. ಹಣ ಹಿಂದಿರುಗಿಸುವಂತೆ ಕೋರಿದರೂ ನೀಡದೇ ಕಾಲ ದೂಡುತ್ತಿದ್ದಾರೆ. ಮನೆಗೆ ಹೋಗಿ ಕೇಳಿದಾಗ ₹20 ಲಕ್ಷ ಮತ್ತು ₹25 ಲಕ್ಷ ರೂಪಾಯಿಗಳ ಎರಡು ಬ್ಯಾಂಕ್ ಆಫ್ ಬರೋಡಾದ ಚೆಕ್ ಗಳನ್ನು ನೀಡಿದ್ದರು. ಆದರೆ, ಚೆಕ್ಗಳು ಬೌನ್ಸ್ ಆಗಿದ್ದವು. ಇದನ್ನು ಪ್ರಶ್ನಿಸಿ ದೂರುದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.