ಕುನೊ ಚೀತಾ ಸರಣಿ ಸಾವು: ಇದು ಪ್ರತಿಷ್ಠೆಯ ವಿಷಯವಾಗಿರುವುದೇಕೆ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್‌

ʼಕಳೆದ ವಾರ ಇನ್ನೂ ಎರಡು ಚೀತಾಗಳು ಸಾವನ್ನಪ್ಪಿವೆ. ಇದು ಪ್ರತಿಷ್ಠೆಯ ವಿಷಯವಾಗುತ್ತಿರುವುದು ಏಕೆ? ದಯವಿಟ್ಟು ಕೆಲ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಿ” ಎಂದು ನ್ಯಾಯಾಲಯ ಮೌಖಿಕವಾಗಿ ತಿಳಿಸಿತು.
Supreme Court
Supreme Court

ಇತ್ತೀಚೆಗೆ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿದ್ದ ಎಲ್ಲಾ ಚಿರತೆಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಮಾತ್ರ ಏಕೆ ಕಳುಹಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು [ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಲಾ ಡಬ್ಲ್ಯೂಡಬ್ಲ್ಯೂಎಫ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಇಷ್ಟು ಕಡಿಮೆ ಅವಧಿಯಲ್ಲಿ ಚೀತಾಗಳು ಸಾವನ್ನಪ್ಪಿರುವುದು ಕಳವಳಕಾರಿ ಪರಿಸ್ಥಿತಿಯ ಚಿತ್ರಣವನ್ನು ನೀಡುತ್ತಿದೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಹಾಗೂ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠ ಬೇಸರ ವ್ಯಕ್ತಪಡಿಸಿದೆ.

ಮುಂದುವರೆದು, " ಕಳೆದ ವಾರ ಇನ್ನೂ ಎರಡು ಚೀತಾಗಳು ಸತ್ತಿವೆ. ಇದು ಪ್ರತಿಷ್ಠೆಯ ವಿಷಯವಾಗುತ್ತಿರುವುದು ಏಕೆ? ದಯವಿಟ್ಟು ಕೆಲ ಸಕಾರಾತ್ಮಕ ಕ್ರಮ ತೆಗೆದುಕೊಳ್ಳಿ. ಅಲ್ಲದೆ, ಅವುಗಳನ್ನು (ಬೇರೆ ಬೇರೆ ಅಭಯಾರಣ್ಯಗಳಿಗೆ) ಕಳಿಸುವ ಬದಲು ಒಂದೇ ಸ್ಥಳದಲ್ಲಿ ಏಕೆ ಇರಿಸಲಾಯಿತು? ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಶೇ 40ರಷ್ಟು ಚೀತಾಗಳು ಸಾವನ್ನಪ್ಪಿರುವುದು ಉತ್ತಮ ಚಿತ್ರಣ ನೀಡುವುದಿಲ್ಲ” ಎಂದು ನ್ಯಾ. ಗವಾಯಿ ತಿಳಿಸಿದರು.

ಕೆಲವು ಚೀತಾಗಳನ್ನು ರಾಜಸ್ಥಾನಕ್ಕೆ ಸ್ಥಳಾಂತರಿಸಬಹುದು ಎಂದು ನ್ಯಾಯಾಲಯ ಮೌಖಿಕವಾಗಿ ಸೂಚಿಸಿತು. "ರಾಜಸ್ಥಾನದ ಅಭಯಾರಣ್ಯವೊಂದು (ಜವಾಯಿ ರಾಷ್ಟ್ರೀಯ ಉದ್ಯಾನವನ) ಚಿರತೆಗಳಿಗೆ ಬಹಳ ಪ್ರಸಿದ್ಧವಾಗಿದೆ. ಉದಯಪುರದಿಂದ 200 ಕಿಲೋಮೀಟರ್ ದೂರದಲ್ಲಿದೆ ಎಂದು ಕಾಣುತ್ತದೆ. ಅಲ್ಲಿ (ಚಿರತೆಗಳು) ಉತ್ತಮ ರೀತಿಯಲ್ಲಿ ಕಾಣಸಿಗುತ್ತವೆ. ಇದನ್ನು ಸಕಾರಾತ್ಮಕ ಪಕ್ಷಪಾತ ಎಂದು ಭಾವಿಸಿ ಅಲ್ಲಿ ಚೀತಾಗಳಿಗಾಗಿ ಇನ್ನೂ ಒಂದು ಅಭಯಾರಣ್ಯ ತೆರೆಯಿರಿ" ಎಂದು ಅವರು ಸಲಹೆ ನೀಡಿದರು.

ಭಾರತದಲ್ಲಿ ಚೀತಾಗಳ ಸಂಖ್ಯೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 2022ರಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಇಪ್ಪತ್ತು ಚೀತಾಗಳನ್ನು ತರಲಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಈ ವರ್ಷದ ಮಾರ್ಚ್‌ನಿಂದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ಮರಿಗಳು ಸೇರಿದಂತೆ ಎಂಟು ಚೀತಾಗಳು ಸಾವನ್ನಪ್ಪಿವೆ. ಸಾವಿಗೆ ವಿವಿಧ ಬಗೆಯ ಸೋಂಕು ಮತ್ತು ಚೀತಾಗಳ ನಡುವಿನ ಕಾದಾಟ ಕಾರಣ ಎನ್ನಲಾಗಿದೆ.

ಪ್ರಾಣಿಗಳ ಏಳಿಗೆಗೆ ಸಂಬಂಧಿಸಿದಂತೆ 1995ರಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಚೀತಾಗಳ ಸಾವಿನ ಕುರಿತು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 1ರಂದು ನಡೆಯಲಿದೆ. ಮುಂದಿನ ವಿಚಾರಣೆ ವೇಳೆಗೆ ಸಲಹೆಗಳು ಮತ್ತು ನವೀಕೃತ ಸ್ಥಿತಿಗತಿ ವರದಿ ಸಲ್ಲಿಸುವಂತೆ ಕಕ್ಷಿದಾರರಿಗೆ ನ್ಯಾಯಾಲಯ ತಿಳಿಸಿತು.

Kannada Bar & Bench
kannada.barandbench.com