ಗಲಭೆಪೀಡಿತ ಮಣಿಪುರ ರಾಜ್ಯದಲ್ಲಿ ಮತ್ತೆ ಮೊಬೈಲ್ ಅಂತರ್ಜಾಲ ಸೇವೆ ಒದಗಿಸಲು ವಿಧಾನ ರೂಪಿಸುವಂತೆ ಮಣಿಪುರ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ [ಅರಿಬಮ್ ಧನಂಜಯ್ ಶರ್ಮಾ ಮತ್ತು ಮಣಿಪುರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ನ್ಯಾಯಮೂರ್ತಿ ಅಹಂತೇಮ್ ಬಿಮೋಲ್ ಸಿಂಗ್ ಮತ್ತು ನ್ಯಾಯಮೂರ್ತಿ ಎ ಗುಣೇಶ್ವರ್ ಶರ್ಮಾ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.
"... ಮೊಬೈಲ್ ಫೋನ್‌ಗಳ ಮೂಲಕ ಅಂತರ್ಜಾಲ ಸೇವೆಗಳನ್ನು ಒದಗಿಸುವ ಕಾರ್ಯತಂತ್ರ/ವಿಧಾನಗಳನ್ನು ರೂಪಿಸುವುದನ್ನು ಸರ್ಕಾರಿ ಅಧಿಕಾರಿಗಳು, ವಿಶೇಷವಾಗಿ, ಗೃಹ ಇಲಾಖೆ ಪರಿಗಣಿಸಬೇಕು. ಪ್ರಕರಣಗಳ ಆಧಾರದ ಮೇಲೆ ಮತ್ತು ಹಂತ-ಹಂತವಾಗಿ ಮೊಬೈಲ್ ಸಂಖ್ಯೆಗಳನ್ನು ಸಕ್ರಮ ಪಟ್ಟಿಗೆ ಸೇರಿಸುವ ಮೂಲಕ ಇದನ್ನು ಸಾಧ್ಯವಾಗಿಸಬೇಕು. ರಾಜ್ಯ ಅಧಿಕಾರಿಗಳು ಈ ಅಂಶವನ್ನು ಪರಿಗಣಿಸಿ ಮುಂದಿನ ವಿಚಾರಣೆ ವೇಳೆ ಮಾಹಿತಿ ಒದಗಿಸಬೇಕು ” ಎಂದು ಪೀಠ ಹೇಳಿದೆ.
ಹಿಂಸಾಚಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿರ್ಬಂಧಿಸಲಾಗಿದ್ದ ಮೊಬೈಲ್ ಅಂತರ್ಜಾಲ ಸೇವೆಗಳನ್ನು ಮರಳಿ ಒದಗಿಸುವಂತೆ ಕೋರಿ ವಿವಿಧ ಕಕ್ಷಿದಾರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.
ವಿಚಾರಣೆ ವೇಳೆ ಸರ್ಕಾರ ಬ್ರಾಡ್‌ಬ್ಯಾಂಡ್ ಮೂಲಕ ಅಂತರ್ಜಾಲ ಸೇವೆ ಒದಗಿಸುವುದಕ್ಕೆ ಸಂಬಂಧಿಸಿದ ನಿಷೇಧವನ್ನು ತೆಗೆದುಹಾಕಿ ಆದೇಶ ಹೊರಡಿಸಲಾಗಿದ್ದು ಕೆಲ ಮೊಬೈಲ್ ಸಂಖ್ಯೆಗಳನ್ನು ಸಕ್ರಮಪಟ್ಟಿಗೆ ಸೇರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದೆ. ಆಗಸ್ಟ್ 31ಕ್ಕೆ ಪ್ರಕರಣದ ವಿಚಾರಣೆ ನಡೆಯಲಿದೆ.