ಚೆಕ್‌ ಬೌನ್ಸ್‌ ಪ್ರಕರಣ: ಮಾಜಿ ಸಚಿವ ನಾಗೇಂದ್ರಗೆ ₹1.25 ಕೋಟಿ ಪಾವತಿಸಲು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ

ವಿಎಸ್‌ಎಲ್‌ ಸ್ಟೀಲ್ಸ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಘೋಡ್ಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ತೀರ್ಪನ್ನು ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರು ಇಂದು ಪ್ರಕಟಿಸಿದರು.
Farmer Minister B Nagendra
Farmer Minister B NagendraFacebook
Published on

ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಶಾಸಕ ಬಿ ನಾಗೇಂದ್ರ ಅವರನ್ನು ದೋಷಿ ಎಂದು ಬುಧವಾರ ತೀರ್ಮಾನಿಸಿರುವ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ದೂರುದಾರರಿಗೆ ₹1.25 ಕೋಟಿ ಪಾವತಿಸಬೇಕು. ತಪ್ಪಿದ್ದಲ್ಲಿ ಒಂದು ವರ್ಷ ಸಾಮಾನ್ಯ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದೆ.

ವಿಎಸ್‌ಎಲ್‌ ಸ್ಟೀಲ್ಸ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಘೋಡ್ಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ತೀರ್ಪನ್ನು 42ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರು ಇಂದು ಪ್ರಕಟಿಸಿದರು.

ಎನ್‌ಐ ಕಾಯಿದೆ ಸೆಕ್ಷನ್‌ 138ರ ಅಡಿ ಮೆಸರ್ಸ್‌ ಬಿ ಸಿ ಇನ್‌ಫ್ರಾಸ್ಟ್ರಕ್ಚರ್‌ ಅಂಡ್‌ ರಿಸೋರ್ಸ್‌ ಕಂಪೆನಿ ಮತ್ತು ಅದರ ಪಾಲುದಾರರಾದ ಅನಿಲ್‌ ರಾಜಶೇಖರ್‌ ಚಂದ್ರು ಭಾಸ್ಕರ್‌ ಮತ್ತು ಬಿ ನಾಗೇಂದ್ರ ಅವರನ್ನು ದೋಷಿಗಳು ಎಂದು ಘೋಷಿಸಲಾಗಿದ್ದು, ₹1.25 ಕೋಟಿ ದಂಡ ಪಾವತಿಸಲು ಆದೇಶಿಸಲಾಗಿದೆ. ಹಣ ಪಾವತಿಸಲು ದೋಷಿಗಳು ವಿಫಲರಾದರೆ ಒಂದು ವರ್ಷ ಸಾಮಾನ್ಯ ಶಿಕ್ಷೆ ಅನುಭವಿಸಬೇಕು. ದಂಡದ ಮೊತ್ತದ ಪೈಕಿ ₹1,24,90,000 ಅನ್ನು ದೂರುದಾರರಿಗೆ ಪರಿಹಾರದ ರೂಪದಲ್ಲಿ, ಬಾಕಿ ₹10 ಸಾವಿರವನ್ನು ರಾಜ್ಯ ಸರ್ಕಾರಕ್ಕೆ ಪಾವತಿಸಬೇಕು ಎಂದು ಆದೇಶಿಸಿಲಾಗಿದೆ.

ಪ್ರಕರಣದ ಹಿನ್ನೆಲೆ: 2013ರಲ್ಲಿ ವಿಎಸ್‌ಎಲ್‌ ಸ್ಟೀಲ್ಸ್‌ ಮತ್ತು ಬಿ ಸಿ ಇನ್‌ಫ್ರಾಸ್ಟ್ರಕ್ಚರ್‌ ಅಂಡ್‌ ರಿಸೋರ್ಸ್‌ ಕಂಪೆನಿ ನಡುವೆ ಹಣಕಾಸಿನ ವಿವಾದ ಸೃಷ್ಟಿಯಾಗಿದ್ದು, ಸಂಧಾನದ ಭಾಗವಾಗಿ ವಿಎಸ್‌ಎಲ್‌ ಸ್ಟೀಲ್ಸ್‌ಗೆ ಬಿ ಸಿ ಇನ್‌ಫ್ರಾಸ್ಟ್ರಕ್ಚರ್‌ ₹2.53 ಕೋಟಿ ಪಾವತಿಸಬೇಕಿತ್ತು. ಇದರ ಭಾಗವಾಗಿ ಬಿ ಸಿ ಇನ್‌ಫ್ರಾಸ್ಟ್ರಕ್ಚರ್‌ ₹1 ಕೋಟಿ ಮೌಲ್ಯದ ಚೆಕ್‌ ನೀಡಿದ್ದು, ಅದು 2022ರಲ್ಲಿ ಬೌನ್ಸ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ವಿಎಸ್‌ಎಲ್‌ ಸ್ಟೀಲ್ಸ್‌ ಚೆಕ್‌ ಬೌನ್ಸ್‌ ದಾವೆ ಹೂಡಿತ್ತು.

Kannada Bar & Bench
kannada.barandbench.com