ಛತ್ರಸಾಲ್ ಸ್ಟೇಡಿಯಂ ಕೊಲೆ ಪ್ರಕರಣದಲ್ಲಿ ಕುಸ್ತಿಪಟು ಮತ್ತು ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್‌ಗೆ ಜಾಮೀನು ನೀಡುವುದಕ್ಕೆ ದೆಹಲಿ ಪೊಲೀಸರು ವಿರೋಧಿಸಿದ್ದು ಆತನೇ ಪ್ರಕರಣದ ಪ್ರಧಾನ ಸೂತ್ರಧಾರನಾಗಿದ್ದು ಸಾಕ್ಷಿಗಳು ಆತನಿಂದ ಭಯಭೀತರಾಗಿದ್ದಾರೆ ಎಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಪೊಲೀಸರು ಸಲ್ಲಿಸಿರುವ ವಸ್ತುಸ್ಥಿತಿ ಪ್ರಕಾರ ಇತರ ಆರೋಪಿಗಳೊಂದಿಗೆ ಸೇರಿ ಸುಶೀಲ್ ಪಿತೂರಿ ನಡೆಸಿದ್ದರು. ಹರಿಯಾಣ ಮತ್ತು ದೆಹಲಿಯ ಕೆಲವು ಭಯಾನಕ ಅಪರಾಧಿಗಳು ಸೇರಿದಂತೆ ಜನ ಹಾಗೂ ಶಸ್ತ್ರಾಸ್ತ್ರಗಳನ್ನು ಒಗ್ಗೂಡಿಸಿದ್ದ ಇವರು ನಂತರ ಬೇರೆ ಬೇರೆ ಪ್ರದೇಶಗಳಿಂದ ಸಂತ್ರಸ್ತರನ್ನು ಅಪಹರಿಸಿದ್ದರು.
"ಆರೋಪಿ ಸುಶೀಲ್ ಕುಮಾರ್ ತನ್ನ ಸಹಚರರೊಂದಿಗೆ ಸ್ಥಳದಿಂದ ಪರಾರಿಯಾಗಿ ಪುರಾವೆಗಳು ಅಂದರೆ ಬಟ್ಟೆ, ಮೊಬೈಲ್ ಫೋನ್, ಶಸ್ತ್ರಾಸ್ತ್ರ, ಅಪರಾಧದ ಆಯುಧಗಳು, ಡಿವಿಆರ್ ಇತ್ಯಾದಿಗಳನ್ನು ನಾಪತ್ತೆ ಮಾಡಿದ್ದರು. ಇದು ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಈಗಾಗಲೇ 18 ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಗುರುತಿಸಲಾಗಿರುವ ಉಳಿದ ವ್ಯಕ್ತಿಗಳನ್ನು ಬಂಧಿಸಬೇಕಿದ್ದು ತನಿಖೆ ಇನ್ನೂ ಪ್ರಗತಿಯಲ್ಲಿದೆ, ”ಎಂದು ವರದಿ ತಿಳಿಸಿದೆ.
ಸುಶೀಲ್ ಒಬ್ಬ ವಿಶ್ವ ಸಂಚಾರಿ, ಅತ್ಯಂತ ಪ್ರಭಾವಶಾಲಿ ಮತ್ತು ಹೈ ಪ್ರೊಫೈಲ್ ವ್ಯಕ್ತಿಯಾಗಿದ್ದಾನೆ. ಆತ ಜಾಮೀನು ಪಡೆದರೆ ಅದನ್ನು ಉಲ್ಲಂಘಿಸಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸುಶೀಲ್ ಮತ್ತು ಆತನ ಸಹಚರರು ಕುಸ್ತಿಪಟು ಸಾಗರ್ ಧನಕರ್ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯ ಪರಿಣಾಮವಾಗಿ, ಧನಕರ್ ಅದೇ ದಿನ ನಿಧನರಾದರು. ಸುಶೀಲ್ ಹಾಗೂ ಇತರರ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 147 (ಗಲಭೆ) ಮತ್ತು 120 ಬಿ (ಅಪರಾಧಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಕಳೆದ ವರ್ಷ ಮೇ 23ರಂದು ಆತನನ್ನು ಬಂಧಿಸಲಾಗಿತ್ತು.