ಬ್ರಾಹ್ಮಣರ ವಿರುದ್ಧ ನಿಂದನಾತ್ಮಕ ಹೇಳಿಕೆ: ಛತ್ತೀಸ್‌ಗಢ ಸಿಎಂ ತಂದೆ ಹದಿನೈದು ದಿನ ನ್ಯಾಯಾಂಗ ಬಂಧನಕ್ಕೆ

ಎಂಬತ್ತಾರು ವರ್ಷದ ನಂದ ಕುಮಾರ್‌ ಭಘೇಲ್‌ ವಿರುದ್ಧ ಸಮಾಜದಲ್ಲಿ ದ್ವೇಷವನ್ನು ಬಿತ್ತುವ ಮೂಲಕ ಬಿಗುವಿನ ವಾತಾವರಣಕ್ಕೆ ಕಾರಣರಾಗುತ್ತಿದ್ದಾರೆ ಎಂದು ಆಪಾದಿಸಿ ‘ಸರ್ವ ಬ್ರಾಹ್ಮಣ ಸಮಾಜ’ ದೂರು ದಾಖಲಿಸಿತ್ತು.
ಬ್ರಾಹ್ಮಣರ ವಿರುದ್ಧ ನಿಂದನಾತ್ಮಕ ಹೇಳಿಕೆ: ಛತ್ತೀಸ್‌ಗಢ ಸಿಎಂ ತಂದೆ ಹದಿನೈದು ದಿನ ನ್ಯಾಯಾಂಗ ಬಂಧನಕ್ಕೆ
CM Bhupesh Baghel

ಬ್ರಾಹ್ಮಣ ಸಮುದಾಯದ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆಪಾದಿಸಿ ಸಮಾಜದಲ್ಲಿ ದ್ವೇಷವನ್ನು ಬಿತ್ತುತ್ತಿರುವ ಆರೋಪದಡಿ ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್‌ ಅವರ ತಂದೆ ನಂದಕುಮಾರ್ ಬಘೇಲ್‌ ಅವರನ್ನು ರಾಯ್‌ಪುರ್‌ ನ್ಯಾಯಾಲಯವು ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ರಾಯ್‌ಪುರದ ಡಿಡಿ ನಗರ ಪೊಲೀಸ್‌ ಠಾಣೆಯಲ್ಲಿ ಬ್ರಾಹ್ಮಣ ಸಮುದಾಯದ ಸಂಘಟನೆಯಾದ ‘ಸರ್ವ ಬ್ರಾಹ್ಮಣ ಸಮಾಜ’ದ ಮುಖಂಡರು 86 ವರ್ಷದ ನಂದ ಕುಮಾರ್‌ ಭಘೇಲ್‌ ವಿರುದ್ಧ ಸಮಾಜದಲ್ಲಿ ದ್ವೇಷವನ್ನು ಬಿತ್ತುವ ಮೂಲಕ ಬಿಗುವಿನ ವಾತಾವರಣಕ್ಕೆ ಕಾರಣರಾಗುತ್ತಿದ್ದಾರೆ ಎಂದು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಶನಿವಾರದಂದು ಬ್ರಾಹ್ಮಣ ಸಮುದಾಯವು ನಂದಕುಮಾರ್‌ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಿತ್ತು.

ನಂದಕುಮಾರ್‌ ಅವರು ಬ್ರಾಹ್ಮಣ ಸಮುದಾಯವನ್ನು ಉದ್ದೇಶಿಸಿ “ಬ್ರಾಹ್ಮಣರು ವಿದೇಶೀಯರಾಗಿದ್ದು ಒಂದೋ ಅವರು ಸುಧಾರಣೆಗೊಳ್ಳಬೇಕು ಇಲ್ಲವೇ ಗಂಗಾದಿಂದ ವೋಲ್ಗಾಗೆ ಹೋಗಲು ಸಿದ್ಧವಾಗಬೇಕು” ಎಂದು ಹೇಳಿದ್ದಾರೆ ಎಂದು ದೂರಿನಲ್ಲಿ ಅರೋಪಿಸಲಾಗಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು, “ಒಬ್ಬ ಮಗನಾಗಿ ನಾನು ನನ್ನ ತಂದೆಯನ್ನು ಗೌರವಿಸುತ್ತೇನೆ. ಆದರೆ, ಒಬ್ಬ ಮುಖ್ಯಮಂತ್ರಿಯಾಗಿ ಸಾಮಾಜಿಕ ಸುವ್ಯವಸ್ಥೆಯನ್ನು ಕದಡುವಂತಹ ಅವರ ಯಾವುದೇ ತಪ್ಪನ್ನು ಉಪೇಕ್ಷಿಸಲಾಗದು. ನಮ್ಮ ಸರ್ಕಾರದಲ್ಲಿ ಯಾರೊಬ್ಬರೂ ಕಾನೂನಿಗಿಂತ ದೊಡ್ಡವರಲ್ಲ, ಅವರು ಮುಖ್ಯಮಂತ್ರಿಯ ತಂದೆಯೇ ಆಗಿದ್ದರೂ ಸರಿಯೇ” ಎಂದಿದ್ದಾರೆ.

Related Stories

No stories found.
Kannada Bar & Bench
kannada.barandbench.com