ಪಿಎಂಎಲ್‌ಎ ನಿಬಂಧನೆಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆಹೋದ ಛತ್ತೀಸ್‌ಗಢ ಸರ್ಕಾರ

ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ಮತ್ತು ವಕೀಲ ಸುಮೀರ್ ಸೋಧಿ ಅವರು ಪೀಠದೆದುರು ಪ್ರಸ್ತಾಪಿಸಿದರು.
Supreme Court, PMLA
Supreme Court, PMLA
Published on

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ನಿಬಂಧನೆಗಳ ವಿರುದ್ಧ ಛತ್ತೀಸ್‌ಗಢ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದೆ.

ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ಮತ್ತು ವಕೀಲ ಸುಮೀರ್ ಸೋಧಿ ಅವರು ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರಿದ್ದ ಪೀಠದೆದುರು ಪ್ರಸ್ತಾಪಿಸಿದರು.

ಸಂವಿಧಾನದ 131ನೇ ವಿಧಿಯಡಿ ಹೂಡಲಾದ ಮೂಲ ದಾವೆಯು ಛತ್ತೀಸ್‌ಗಢ ರಾಜ್ಯದಲ್ಲಿ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ಇತ್ತೀಚಿನ ಶೋಧಗಳಿಗೆ ಸಂಬಂಧಿಸಿದ್ದಾಗಿದೆ. ಸಂವಿಧಾನದ 131ನೇ ವಿಧಿ ಪ್ರಕಾರ ಅಂತರರಾಜ್ಯ ಇಲ್ಲವೇ ಕೇಂದ್ರ ಮತ್ತು ರಾಜ್ಯಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ವಿಚಾರಣೆ ನಡೆಸುವ ನ್ಯಾಯವ್ಯಾಪ್ತಿ ಸುಪ್ರೀಂ ಕೋರ್ಟ್‌ಗೆ ಇದೆ.

ಅರ್ಜಿಯಲ್ಲಿ ಪಿಎಂಎಲ್‌ಎ ಕಾಯಿದೆಯ ಸೆಕ್ಷನ್ 17 (ಶೋಧ ಮತ್ತು ಜಪ್ತಿ), 50 (ಸಮನ್ಸ್‌, ದಾಖಲೆಗಳ ಪ್ರಸ್ತುತಿ ಹಾಗೂ ಸಾಕ್ಷ್ಯ ನೀಡಿಕೆ ಇತ್ಯಾದಿಗಳ ಬಗ್ಗೆ ಅಧಿಕಾರಿಗಳಿಗೆ ಇರುವ ಅಧಿಕಾರ), 63 (ಸುಳ್ಳು ಮಾಹಿತಿ ಅಥವಾ ಮಾಹಿತಿ ನೀಡಲು ವಿಫಲವಾದರೆ ಶಿಕ್ಷೆ ಇತ್ಯಾದಿ), 71 (ಅತಿಕ್ರಮಣ ಪರಿಣಾಮ ಬೀರುವ ಕಾಯಿದೆ) ಕುರಿತು ಸಾಂವಿಧಾನಿಕ ಪ್ರಶ್ನೆಗಳನ್ನು ಎತ್ತಲಾಗಿದೆ. ಇವು ಸಂವಿಧಾನಕ್ಕೆ ಧಕ್ಕೆ ತರುತ್ತವೆ ಎಂದು ಘೋಷಿಸುವಂತೆ ಅರ್ಜಿ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಮತ್ತೊಂದೆಡೆ ಅಧ್ಯಾಯ V (ವ್ಯಕ್ತಿಗಳ ಬಂಧನ), VI (ಕಡ್ಡಾಯ ಹಾಜರಾತಿ ಪ್ರಕ್ರಿಯೆ), VII (ಸಾಕ್ಷ್ಯಗಳನ್ನು ಸಲ್ಲಿಸುವ ಕಡ್ಡಾಯ ಪ್ರಕ್ರಿಯೆ), XII (ಪೊಲೀಸರಿಗೆ ಮಾಹಿತಿ ಮತ್ತು ತನಿಖೆ ಮಾಡುವ ಅವರ ಅಧಿಕಾರ ನೀಡುವ ನಿಯಮ) ಸಿಆರ್‌ಪಿಸಿ XIII (ತನಿಖೆ ಮತ್ತು ವಿಚಾರಣೆಯಲ್ಲಿ ಕ್ರಿಮಿನಲ್‌ ನ್ಯಾಯಾಲಯಗಳ ನ್ಯಾಯವ್ಯಾಪ್ತಿ) ಪಿಎಂಎಲ್‌ಎಗೆ ಅನ್ವಯವಾಗುತ್ತವೆ ಎಂದು ಘೋಷಿಸುವಂತೆ ಕೋರಲಾಗಿದೆ.

Kannada Bar & Bench
kannada.barandbench.com