ಛಾವಲಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಮೂವರು ಅಪರಾಧಿಗಳ ಖುಲಾಸೆ ಪ್ರಶ್ನಿಸಿ ದೆಹಲಿ ಸರ್ಕಾರ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ [ದೆಹಲಿ ಸರ್ಕಾರ, ಗೃಹ ಸಚಿವಾಲಯ ಮತ್ತು ರಾಹುಲ್ ಇನ್ನಿತರರ ನಡುವಣ ಪ್ರಕರಣ].
ಮಾರ್ಚ್ 2ರಂದೇ ತೀರ್ಪು ನೀಡಲಾಗಿತ್ತಾದರೂ ತೀರ್ಪಿನ ವಿವರಗಳನ್ನು ನ್ಯಾಯಾಲಯ ಸೋಮವಾರ ಪ್ರಕಟಿಸಿದೆ. “ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಲಾಗಿರುವ ಯಾವ ಅರ್ಜಿಗಳೂ ಅಧಿಕೃತವಾಗಿ ಸಲ್ಲಿಕೆಯಾಗಿರುವ ದಾಖಲೆಗಳಲ್ಲಿರಬಹುದಾದ ಯಾವುದೇ ದೋಷವನ್ನು ಹೇಳಿಲ್ಲ. ನಮಗೆ ಯಾವುದೇ ವಾಸ್ತವಿಕ ಅಥವಾ ಕಾನೂನಾತ್ಮಕ ದೋಷ ಕಂಡುಬಂದಿಲ್ಲ” ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ನುಡಿಯಿತು.
ನ್ಯಾಯಾಲಯ ಖುಲಾಸೆಗೊಳಿಸಿದ್ದ ಪ್ರಕರಣದ ಆರೋಪಿಯೊಬ್ಬ ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೊಂದು ಕೊಲೆ ಮಾಡಿದ್ದಾನೆ. ಇದನ್ನು ಗಮನಿಸಿದರೆ ಆರೋಪಿ ಘೋರ ಅಪರಾಧಿಯಾಗಿದ್ದು, ನ್ಯಾಯಾಲಯದ ಔದಾರ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಸರ್ಕಾರ ಮಂಡಿಸಿದ ವಾದವನ್ನು ಪೀಠ ತಿರಸ್ಕರಿಸಿತು.
"ತೀರ್ಪು ಪ್ರಕಟವಾದ ನಂತರ ಆ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲದ ಘಟನೆ ನಡೆದಿದ್ದರೆ, ಅದು ಮರುಪರಿಶೀಲನಾ ಅರ್ಜಿಗಳನ್ನು ಪರಿಗಣಿಸಲು ಆಧಾರವಾಗುವುದಿಲ್ಲ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಫೆಬ್ರವರಿ 9, 2012ರ ರಾತ್ರಿ, ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಅಪಹರಣಕ್ಕೊಳಗಾದ ಹುಡುಗಿಯೊಂದಿಗೆ ಇದ್ದ ಸ್ನೇಹಿತೆ ನೀಡಿದ ದೂರಿನ ಮೇಲೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಸಂತ್ರಸ್ತೆಯ ಶವ ರೋಡೈ ಗ್ರಾಮದ ಜಮೀನಿನಲ್ಲಿ ಪತ್ತೆಯಾಗಿತ್ತು. ಆಕ್ಷೇಪಾರ್ಹ ರೀತಿಯಲ್ಲಿ ಕಾರನ್ನು ಓಡಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ತಡೆದಾಗ ಘಟನೆ ಬೆಳಕಿಗೆ ಬಂದಿತ್ತು.
ವಿಚಾರಣಾ ನ್ಯಾಯಾಲಯವೊಂದು ಆರೋಪಿಗಳಾದ ರಾಹುಲ್, ರವಿಕುಮಾರ್ ಮತ್ತು ವಿನೋದ್ ಅವರಿಗೆ 2014ರಲ್ಲಿ ಮರಣದಂಡನೆ ವಿಧಿಸಿತ್ತು. ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿತ್ತು. ಆದರೆ ಕಳೆದ ನವೆಂಬರ್ 7ರಂದು ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ತೀರ್ಪು ನೀಡುವಾಗ ಪೊಲೀಸರ ವಾದದಲ್ಲಿ ಹಲವು ಹುಳುಕುಗಳನ್ನು ಪತ್ತೆಹಚ್ಚಿತು. ಪರಿಣಾಮ ಮೂವರೂ ಅಪರಾಧಿಗಳು ಖುಲಾಸೆಗೊಂಡಿದ್ದರು.